ಪ್ಯಾರಾಚೂಟ್‌ ಅವಘಡದಲ್ಲಿ ಹೊಸನಗರ ಯೋಧ ಹುತಾತ್ಮ - ಉ.ಪ್ರದೇಶದ ಆಗ್ರಾದಲ್ಲಿ ನಡೆದ ದುರ್ಘಟನೆ

ಸಾರಾಂಶ

ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆಯುತ್ತಿದ್ದ ತರಬೇತಿ ವೇಳೆ ನಡೆದ ಅವಘಡದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿ, ತಾಲೂಕಿನ ಸಂಕೂರು ಗ್ರಾಮದ ಮಂಜುನಾಥ್ (36) ಹುತಾತ್ಮರಾಗಿದ್ದಾರೆ.

  ಹೊಸನಗರ : ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆಯುತ್ತಿದ್ದ ತರಬೇತಿ ವೇಳೆ ನಡೆದ ಅವಘಡದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿ, ತಾಲೂಕಿನ ಸಂಕೂರು ಗ್ರಾಮದ ಮಂಜುನಾಥ್ (36) ಹುತಾತ್ಮರಾಗಿದ್ದಾರೆ.

ಆಗ್ರಾದಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರದಲ್ಲಿ ಶುಕ್ರವಾರ ಬೆಳಗ್ಗೆ ಜೂನಿಯರ್ ವಾರೆಂಟ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ್ ವಿಮಾನದಿಂದ ಜಿಗಿಯುವ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ತರಬೇತಿ ಶಿಬಿರದಲ್ಲಿ ಒಟ್ಟು 11 ಮಂದಿ ವಿಮಾನದಿಂದ ಜಿಗಿದಿದ್ದರು. ಆದರೆ, ಪ್ಯಾರಾಚೂಟ್ ತೆರೆದುಕೊಳ್ಳದ್ದರಿಂದ ಮಂಜುನಾಥ್ ಮೂಲಸ್ಥಳಕ್ಕೆ ಹಿಂದಿರುಗಲಿಲ್ಲ. ಶೋಧ ಕಾರ್ಯ ನಡೆಸಿದಾಗ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ದೃಢೀಕರಿಸಿದರು.

ಮೃತರು ತಂದೆ ಸುರೇಶ್‌, ತಾಯಿ ನಾಗರತ್ನ, ಇಬ್ಬರು ಸಹೋದರಿಯರು, ಒಬ್ಬ ಸಹೋದರನನ್ನು ಅಗಲಿದ್ದಾರೆ. ಹೊಸನಗರ ತಾಲೂಕಿನ ಸಂಕೂರು ಸಮೀಪದ ಗೋರನಗದ್ದೆ ವಾಸಿ ಜಿ.ಎಸ್.ಮಂಜುನಾಥ್, ಸಾಗರದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಬಳಿಕ, ಭಾರತೀಯ ವಾಯುಸೇನೆಗೆ ಸೇರಿದ್ದರು. ವೈ ಗ್ರೇಡ್‌ ಅಧಿಕಾರಿಯಾಗಿದ್ದ ವಾರಂಟ್‌ ಅಫೀಸರ್‌ ಮಂಜುನಾಥ್‌, ಅಸ್ಸಾಂನಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸ್ಸಾಂ ಮೂಲದ ಯುವತಿಯನ್ನು ಮದುವೆಯಾಗಿದ್ದರು. ಘಟನೆ ಬಗ್ಗೆ ಮಂಜುನಾಥ್‌ ಅವರ ಕುಟುಂಬಕ್ಕೆ ಶುಕ್ರವಾರ ಮಧ್ಯಾಹ್ನ ಮಾಹಿತಿ ನೀಡಲಾಗಿದೆ.

ಭಾನುವಾರ ಬೆಳಗ್ಗೆ ಸೇನಾನಿಯ ಮೃತದೇಹ ಪಟ್ಟಣ ತಲುಪುವ ನಿರೀಕ್ಷೆಯಿದ್ದು, ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಸಕಲ ಸರ್ಕಾರಿ ಗೌರವ ನೀಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.

Share this article