ಶಿವಪೂಜೆ, ಶಿವಭಜನೆ, ಶಿವಕೀರ್ತನೆ, ಶಿವಧ್ಯಾನ । ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ
ಶಿವಭಕ್ತರಿಗೆ ಅತ್ಯಂತ ಪ್ರಿಯವಾದ ದಿನವೆನಿಸಿದ ಮಹಾಶಿವರಾತ್ರಿಯನ್ನು ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು.
ಶಿವರಾತ್ರಿ ಹಿನ್ನೆಲೆ ದೇವಸ್ಥಾನಗಳಲ್ಲಿ ಶಿವನಾಮಸ್ಮರಣೆ ಮೊಳಗಿದರೆ, ಮನೆ ಮನೆಗಳಲ್ಲೂ ಶಿವನ ಪೂಜಾ ಕೈಂಕರ್ಯಗಳು ನಡೆದವು. ಶಿವಪೂಜೆ, ಶಿವಭಜನೆ, ಶಿವಕೀರ್ತನೆ, ಶಿವಧ್ಯಾನ, ಶಿವತತ್ವ ಆಚರಣೆಯ ಜೊತೆಗೆ ಓಂನಮಃಶಿವಾಯ ಎಂಬ ಶಿವಪಂಚಾಕ್ಷರಿ ಮಹಾಮಂತ್ರ ಪಠಣಗೊಂಡವು.ಶಿವರಾತ್ರಿ ಹಿನ್ನೆಲೆ ನಗರದ ಪ್ರಮುಖ ಶಿವಾಲಯಗಳು ಭಕ್ತರಿಂದ ಭರ್ತಿಯಾಗಿದ್ದವು. ನಗರದ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರಸ್ವಾಮಿ, ಪಾರ್ವತಿ ನಗರದ ಅನಾದಿಲಿಂಗೇಶ್ವರ, ಬೆಂಗಳೂರು ರಸ್ತೆಯಲ್ಲಿನ ನಗರೇಶ್ವರಸ್ವಾಮಿ, ತೇರುಬೀದಿಯ ಶ್ರೀನೀಲಕಂಠೇಶ್ವರಸ್ವಾಮಿ, ಕಪ್ಪಗಲ್ ರಸ್ತೆಯ ಶ್ರೀ ಮದ್ದಾನೇಶ್ವರ ಸ್ವಾಮಿ ಸೇರಿದಂತೆ ವಿವಿಧ ಶಿವನ ದೇವಾಲಯಗಳಲ್ಲಿ ಪೂಜಾ, ವಿಧಿವಿಧಾನಗಳು ಜರುಗಿದವು. ಮಹಿಳೆಯರು, ಮಕ್ಕಳು, ವೃದ್ಧರು ಶಿವಪಂಚಾಕ್ಷರಿ ಮಂತ್ರ ಪಠಿಸುತ್ತಾ ಉಪವಾಸ ಜಾಗರಣೆ ಮಾಡಿದರು.
ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ದೃಶ್ಯಗಳು ಕಂಡು ಬಂದವಾದರೂ ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿವಭಕ್ತರು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು.
ಗಣಿನಗರಿ ಬಳ್ಳಾರಿಯಲ್ಲಿ ಮಂಗಳವಾರ ಸಂಜೆಯಿಂದಲೇ ಹಬ್ಬದ ಸಡಗರ ಕಳೆಗಟ್ಟಿತ್ತು. ಬುಧವಾರ ಜರುಗುವ ಮಹಾಶಿವರಾತ್ರಿಗೆ ಅಗತ್ಯ ಸಿದ್ಧತೆಗಳಲ್ಲಿ ತೊಡಗಿಸಿಕೊಂಡದ್ದರು. ಪೂಜಾ ಸಾಮಗ್ರಿಗಳು, ಹೂವು, ಹಣ್ಣುಗಳ ಖರೀದಿ ಭರಾಟೆಯಿಂದಾಗಿ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಇಲ್ಲಿನ ಕೋಟೆ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ತೆರಳಿ ದರ್ಶನ ಪಡೆದರು. ಭಕ್ತರ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಜೊತೆಗೆ ಬ್ಯಾರಿಕೇಡ್‌ಗಳ ಮೂಲಕ ಸಾಲಾಗಿ ಬಂದು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಭಕ್ತ ಸಮೂಹ ನಿಯಂತ್ರಿಸಲು ಪೊಲೀಸರು ಪರದಾಡಿದರು.
ನಗರದ ವಿವಿಧ ಸಂಘಟನೆಗಳು ಶಿವಸ್ಮರಣೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದವು. ಇಡೀ ರಾತ್ರಿ ಶಿವನಿಗೆ ಸಂಬಂಧಿಸಿದ ಭಕ್ತಿಗೀತೆಗಳನ್ನು ಹಾಡಿ ಗಾಯಕರು ಮನರಂಜಿಸಿದರು.
ಗ್ರಾಮೀಣ ಪ್ರದೇಶಗಳಲ್ಲೂ ಶಿವಸ್ಮರಣೆಯ ಶಿವರಾತ್ರಿ ಆಚರಣೆ ನಡೆದವು. ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ನಗರ ಹೊರ ವಲಯದ ಶ್ರೀಮಹಾದೇವತಾತಮಠ, ಮರಿಸ್ವಾಮಿಮಠ, ಚೇಳ್ಳಗುರ್ಕಿ ಎರ್ರಿಸ್ವಾಮಿ ಮಠ, ಸಿರುಗುಪ್ಪ ತಾಲೂಕಿನ ಹಳೆಕೋಟೆ ಹಾಗೂ ದರೂರು ವೀರಭದ್ರೇಶ್ವರ ದೇವಾಲಯಗಳು, ಸಂಡೂರಿನ ಶ್ರೀಕುಮಾರಸ್ವಾಮಿ, ಕುರುಗೋಡು ದೊಡ್ಡಬಸವೇಶ್ವರ, ಕಂಪ್ಲಿಯ ಬಸವೇಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಶಿವಲಿಂಗ ದರ್ಶನ ಪಡೆದರು. ಕರ್ನಾಟಕಾಂಧ್ರ ಗಡಿಭಾಗದಲ್ಲಿರುವ ಹಿರೇಹಾಳು ಗವಿಸಿದ್ಧೇಶ್ವರಸ್ವಾಮಿ ದೇವಸ್ಥಾನಕ್ಕೆ ನಗರದಿಂದ ಸಾವಿರಾರು ಜನರು ತೆರಳಿ ಪೂಜೆ ಸಲ್ಲಿಸಿದರು. ಹಬ್ಬದ ಹಿನ್ನೆಲೆ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ನೂರಾರು ಜನರು ಪಾದಯಾತ್ರೆಯ ಮೂಲಕ ತೆರಳಿದ್ದು, ಬುಧವಾರ ಶ್ರೀಶೈಲ ತಲುಪಿ, ದೇವರ ದರ್ಶನ ಪಡೆದರು.