ಶಿವಾನಿ ಈಗ ಸಾಂಸ್ಕೃತಿಕ ರಾಯಭಾರಿ: 8 ಪ್ರಶಸ್ತಿಗಳ ಒಡತಿ

KannadaprabhaNewsNetwork |  
Published : Aug 24, 2026, 01:45 AM IST
ಚಿತ್ರ 23ಬಿಡಿಆರ್‌5ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಶಸ್ತಿಗಳನ್ನು ಪ್ರದರ್ಶಿಸಿದ ಖ್ಯಾತ ಗಾಯಕಿ ಶಿವಾನಿ ಶಿವದಾಸ ಸ್ವಾಮಿ. | Kannada Prabha

ಸಾರಾಂಶ

ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ, ಮುಂಬೈ ವತಿಯಿಂದ ನವೆಂಬರ್‌- ಡಿಸೆಂಬರ್‌ 2024ರಲ್ಲಿ ನಡೆದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್‌ ಗಳಿಸುವುದರ ಜೊತೆಗೆ ಗಾಯನ ವಿಷಯದಲ್ಲಿಯೂ ಅತ್ಯುನ್ನತ ಅಂಕಗಳನ್ನು ಪಡೆದಿರುವ ಖ್ಯಾತ ಗಾಯಕಿ ಶಿವಾನಿ ಶಿವದಾಸಸ್ವಾಮಿ ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ, ಮುಂಬೈ ವತಿಯಿಂದ ನವೆಂಬರ್‌- ಡಿಸೆಂಬರ್‌ 2024ರಲ್ಲಿ ನಡೆದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್‌ ಗಳಿಸುವುದರ ಜೊತೆಗೆ ಗಾಯನ ವಿಷಯದಲ್ಲಿಯೂ ಅತ್ಯುನ್ನತ ಅಂಕಗಳನ್ನು ಪಡೆದಿರುವ ಖ್ಯಾತ ಗಾಯಕಿ ಶಿವಾನಿ ಶಿವದಾಸಸ್ವಾಮಿ ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಾನಿ ಶಿವದಾಸ ಸ್ವಾಮಿ, ಈ ಸಾಧನೆ ತನ್ನ ಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ದೇಶದಾದ್ಯಂತ ತನ್ನ ಪ್ರತಿಭೆಯನ್ನು ಗುರುತಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ದೀಕ್ಷಾಂತ ಸಮಾರಂಭವು ಆಗಸ್ಟ್‌ 22ರಂದು ನವಿಮುಂಬೈನ ವಾಶಿಯ ವಿಷ್ಣುದಾಸ ಭಾವೆ ನಾಟ್ಯಗೃಹದಲ್ಲಿ ನಡೆದಿದ್ದು, ಸಮಾರಂಭದಲ್ಲಿ ತನಗೆ ಪ್ರೀತಮ್‌ ಕೌರ್‌ ಸೌದಿ ಪ್ರಶಸ್ತಿ, ದಿ. ಪಂ. ದಿ.ವಿ.ಪಾಲುಸ್ಕರ್‌ ಪ್ರಶಸ್ತಿ, ಸೌ.ನಳಿನಿ ಪ್ರತಾಪ್ ಕಾನವಿಂದೆ ಪ್ರಶಸ್ತಿ, ಪ್ರಾ. ವಾಸುದೇವ ಚಿಂತಾಮಣಿ ವಾಘಮಾರೆ ಪ್ರಶಸ್ತಿ, ಹರಿಓಂ ಟ್ರಸ್ಟ್‌ (ಗಾಯನ) ಪ್ರಥಮ ಪ್ರಶಸ್ತಿ,, ಶ್ರೀ ಹರಿಶ್ಚಂದ್ರ ಬಾಳಕೃಷ್ಣ ಪೋತದಾರ್‌ ಪ್ರಶಸ್ತಿ,, ಪಂ. ನಾ.ಕೃ. ಕ-ಹಾಡೆ ಸ್ಮೃತಿ ಪ್ರಶಸ್ತಿ ಹಾಗೂ ದಿ.ಸೌ.ಪ್ರಾಜಕ್ತಾ ಪುರುಷೋತ್ತಮ ಕುಲಕರ್ಣಿ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮುಂಬೈ ವತಿಯಿಂದ ನವೆಂಬರ್‌–ಡಿಸೆಂಬರ್‌ ಅವಧಿಯಲ್ಲಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ರ‍್ಯಾಂಕ್‌ ಪಡೆದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನನ್ನು ಪ್ರೋತ್ಸಾಹಿಸಿದ ಗುರುಗಳು, ತಂದೆ ತಾಯಿ, ಕುಟುಂಬಸ್ಥರು ಹಾಗೂ ಬೀದರ್‌ ಜನರ ಸಹಕಾರವೇ ಇದಕ್ಕೆ ಕಾರಣ ಎಂದು ಶಿವಾನಿ ಹೇಳಿದರು.

ಶಿವಾನಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು: ಶಿವಾನಿ ಅವರ ಅಪರೂಪದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅಗತ್ಯ ಸರ್ಕಾರಿ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್‌ನ ರಾಮಕೃಷ್ಣನ್‌ ಸಾಳೆ ಒತ್ತಾಯಿಸಿದರು. ಇಂತಹ ಪ್ರತಿಭೆಗಳನ್ನು ಬೆಳೆಸುವ ಮೂಲಕ ಬೀದರ್‌ ಜಿಲ್ಲೆ ಹಾಗೂ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಬಹುದು. ಶಿವಾನಿ ಅವರು ಇದೀಗ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ಅವರಿಗೆ ಸರ್ಕಾರದ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.

ರಾಷ್ಟ್ರಮಟ್ಟದಲ್ಲಿ ಶಿವಾನಿ ಹೆಸರು ಶಿಫಾರಸ್ಸು ಮಾಡಲಿ: ರಾಜ್ಯ ಸರ್ಕಾರವು ಶಿವಾನಿ ಅವರ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಶಿಫಾರಸು ಮಾಡಬೇಕು ಎಂದು ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಾ. ರಾಜೇಂದ್ರ ಸಿಂಗ್‌ ಪವಾರ್‌ ಆಗ್ರಹಿಸಿದರು.

ಸಂಗೀತ ಕ್ಷೇತ್ರದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶಿಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರ ಹಾಗೂ ಸಮಾಜವು ಶಿವಾನಿ ಅವರ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕನ್ನಡಾಂಬೆಯ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಉದಯ ಪಾಟೀಲ್‌, ಶಿವಾನಿಯ ತಾಯಿ ಕವಿತಾ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಗಳಿಗೆ ನಾವು ಜನ್ಮ ನೀಡಿರಬಹುದು ಆದರೆ ಆಕೆಯ ಪ್ರತಿಭೆಯನ್ನು ಬೆಳೆಸುತ್ತಿರುವುದು, ಪ್ರೋತ್ಸಾಹಿಸುತ್ತಿರುವುದು ಹಾಗೂ ಬೆಂಬಲಿಸುತ್ತಿರುವುದು ಇಡೀ ಸಮಾಜ. ಜನರು ನೀಡುತ್ತಿರುವ ಪ್ರೀತಿ ಮತ್ತು ಸಹಕಾರದಿಂದಲೇ ಶಿವಾನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಎಲ್ಲರೂ ಸಹಕರಿಸಿ, ಪ್ರೋತ್ಸಾಹಿಸಿ ಎಂದು ಶಿವಾನಿ ತಂದೆ ಶಿವದಾಸ ಸ್ವಾಮಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮಾವತಿ ಜಲಾಶಯದಿಂದ ಕೆರೆಕಟ್ಟೆಗಳಿಗೆ ನೀರು: ಶಾಸಕ ಎಚ್.ಟಿ.ಮಂಜು ಪರಿಶೀಲನೆ
ಎಚ್ಡಿಕೆಯಿಂದ ಶ್ರೀಅಭಯ ಆಂಜನೇಯಸ್ವಾಮಿ ದೇಗುಲ ಲೋಕಾರ್ಪಣೆ