ಕನ್ನಡಪ್ರಭ ವಾರ್ತೆ ಗದಗ
ಶ್ರೀಮಠದಲ್ಲಿ ಆಯೋಜಿಸಲಾಗಿದ್ದ ಬಸವದಳದ 1721ನೇ ಶರಣರ ಸಂಗಮ, ಪ್ರಾತಃಕಾಲ ಶಿವಾನುಭವ ನಡೆದು ಬಂದ ದಾರಿ ಹಾಗೂ ಇತ್ತೀಚೆಗೆ ಲಿಂಗೈಕ್ಯರಾದ ಶರಣೆ ರತ್ನಕ್ಕ ಪಾಟೀಲ ಅವರ ನುಡಿನಮನ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮುಂಜಾನೆಯ ವೇಳೆ ಮಠದ ಸದರಿನಲ್ಲಿ ಸಮಾವೇಶಗೊಂಡು ವಚನ ಸಾಹಿತ್ಯ, ಯಡಿಯೂರು ಸಿದ್ಧಲಿಂಗೇಶ್ವರರ ವಚನಗಳು ಹಾಗೂ ಮೈಲಾರ ಬಸವಲಿಂಗ ಶರಣರ ತ್ರಿಪದಿಗಳ ಮಂಥನದ ಮೂಲಕ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ನಿರಂತರವಾಗಿ ಸಾಗಿದೆ. ಲಿಂ. ರತ್ನಕ್ಕ ಪಾಟೀಲ ಅವರು ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಬಸವದಳ, ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ಹತ್ತು ಹಲವು ಸಂಘಟನೆಗಳ ಮೂಲಕ ಸಮಾಜಮುಖಿಯಾಗಿ ಬದುಕಿ ಮಾದರಿಯಾಗಿದ್ದರು ಎಂದು ಸ್ಮರಿಸಿದರು.ಶರಣ ಬಸವರಾಜ ವೆಂಕಟಾಪೂರ ಲಿಂ. ರತ್ನಕ್ಕ ಪಾಟೀಲ ಕುರಿತು ತಾವು ರಚಿಸಿದ ಕವನ ವಾಚಿಸಿ ನುಡಿನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಎಸ್. ಪಟ್ಟಣಶೆಟ್ಟರ, ಡಾ. ಉಮೇಶ ಪುರದ, ಶರಣ ವಿವೇಕಾನಂದ ಪಾಟೀಲ, ಕೆ.ಎಸ್. ಚೆಟ್ಟಿ, ಪ್ರಕಾಶ ಅಸುಂಡಿ ಪಾಲ್ಗೊಂಡು ಅನುಭವ ಹಂಚಿಕೊಂಡರು.
ಪ್ರಾರಂಭದಲ್ಲಿ ಸುಜಾತಾ ವಾರದ, ರೇಣುಕಾ ಕರೆಗೌಡ್ರ, ಸುವರ್ಣಾ ಗಾಳಿಪ್ಪನವರ, ಹಳ್ಳಿಕೇರಿ ಪ್ರಾರ್ಥಿಸಿದರು. ವಿ.ಕೆ. ಕರೆಗೌಡ್ರ ಸ್ವಾಗತಿಸಿದರು. ಮಂಜುಳಾ ಹಾಸಿಲಕರ ನಿರೂಪಿಸಿದರು. ಕಿರಣ ತಿಪ್ಪಣ್ಣವರ ಶರಣು ಸಮರ್ಪಣೆ ಮಾಡಿದರು.