ಕನ್ನಡಪ್ರಭ ವಾರ್ತೆ ಬೆಂಗಳೂರು
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ಹಾಗೂ ಬಿಡಿಎ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಮತ್ತು ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯ್ಕ ಅವರಿದ್ದ ವಿಶೇಷ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸರ್ಕಾರದ ಪರ ರಾಜ್ಯ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಅನುಮತಿ ನೀಡಬೇಕು. ಬಡಾವಣೆ ಅಭಿವೃದ್ಧಿ ಕಾಮಗಾರಿಗಾಗಿ 1,100 ಕೋಟಿ ರು.ಸಾಲ ಪಡೆದು ಬಡ್ಡಿ ಕಟ್ಟಲಾಗುತ್ತಿದೆ. ಬಡಾವಣೆ ಕಾಮಗಾರಿ ಅಂತಿಮ ಹಂತದಲ್ಲಿದೆ. ನಿವೇಶನ ಹಂಚಿಕೆಗೆ ಸಾಕಷ್ಟು ಸಮಯ ಹಿಡಿಯಲಿದೆ. ಹಾಗಾಗಿ, ಅರ್ಜಿ ಸ್ವೀಕರಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.ಅದಕ್ಕೆ ಒಪ್ಪಿದ ಪೀಠ, ದುಬಾರಿ ಅರ್ಜಿ ಶುಲ್ಕ ವಿಧಿಸದಂತೆ ಸರ್ಕಾರಕ್ಕೆ ಸಲಹೆ ನೀಡಿ ಅರ್ಜಿ ಸ್ವೀಕರಿಸಲು ಅನುಮತಿ ನೀಡಿತು. ಇದೇ ವೇಳೆ ಅರ್ಜಿ ಸ್ವೀಕರಿಸಿದರೂ ನಿವೇಶನ ಹಂಚಿಕೆಗೆ ಈ ಹಿಂದೆ ನೀಡಲಾಗಿರುವ ನಿರ್ಬಂಧವನ್ನು ಇದೇ ವೇಳೆ ಮುಂದುವರಿಸಿತು.