ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಶಿವದೇಗುಲಗಳಲ್ಲಿ ಶಿವನಾಮ ಸಂಕೀರ್ತನೆ, ಭಜನೆ, ಪಾರಾಯಣಗಳು ನಡೆದವು. ಜನರು ಉಪವಾಸ ವೃತಾಚರಣೆಯೊಂದಿಗೆ ಮನೆಗಳಲ್ಲಿ ಪೂಜಾ ಕಾರ್ಯಗಳನ್ನು ನಡೆಸಿದರು. ಜಾಗರಣೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೂ ಏರ್ಪಾಟಾಗಿದ್ದವು. ಎಲ್ಲೆಡೆ ಓಂ ನಮಃ ಶಿವಾಯ, ಹರಹರ ಮಹಾದೇವ್ ಮಂತ್ರ ಘೋಷಗಳು ಕೇಳಿ ಬಂದವು.
ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಚೌಕದ ವೃತ್ತದಿಂದ ಹಳೇ ಪೊಲೀಸ್ ಠಾಣೆ ವರೆಗೆ ವಿವಿಧ ಬಗೆಯ ವಿದ್ಯುದ್ದೀಪ ಹಾಗೂ ದೇವಾನುದೇವತೆಗಳ ಮಾದರಿಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ನಗರೇಶ್ವರ ಸ್ವಾಮಿ, ಪಾರ್ವತಾ ದೇವಿ, ಮಹಾಗಣಪತಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಬೆಳಗ್ಗಿನಿಂದಲೂ ಭಕ್ತರು ತಂಡೋಪತಂಡವಾಗಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀಸ್ವಾಮಿಯ ದರ್ಶನ ಪಡೆದರು. ಹಬ್ಬದ ಅಂಗವಾಗಿ ದೇವಾಲಯದ ಮೂಲದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಇಲ್ಲಿನ ತೇರಿನ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಾಲಯ ಮತ್ತು ಬಸವಭವನದ ಸಮೀಪ ಇರುವ ಶ್ರೀಸ್ವಯಂಭುವೇಶ್ವರ ದೇವಾಲಯಗಳಲ್ಲಿ ಪ್ರತಿವರ್ಷದಂತೆ ಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಅದೇ ರೀತಿ ದೊಡ್ಡಬಳ್ಳಾಪುರ ನಗರದಲ್ಲಿರುವ ಬಸವಣ್ಣ ದೇವಾಲಯ, ಶ್ರೀರಾಮಲಿಂಗ ಚಂದ್ರಚೌಡೇಶ್ವರಿ ದೇವಾಲಯ, ಬಯಲು ಬಸವಣ್ಣ ದೇವಾಲಯ, ವಿನಾಯಕ ದೇವಾಲಯ, ಅಭಯ ಚೌಡೇಶ್ವರಿ ದೇಗುಲ, ಕಾಳಿಕಾ ಕಮಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ಏರ್ಪಾಟಾಗಿದ್ದವು.
ಸಂಜೆಯ ನಂತರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಮಹಿಳೆಯರು ವಿಶೇಷವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದ ದೖಶ್ಯ ಸಾಮಾನ್ಯವಾಗಿತ್ತು. ಮಹಾಶಿವರಾತ್ರಿ ಜಾಗರಣೆ ಅಂಗವಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಏರ್ಪಾಟಾಗಿದ್ದವು.