ಗದಗ: ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಡಗರ ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಿಸಲಾಯಿತು.
ಸಾರ್ವಜನಿಕರು ಗದಗ ನಗರದ ಐತಿಹಾಸಿಕ ಪ್ರಸಿದ್ಧ ತ್ರಿಕೂಟೇಶ್ವರ ದೇವಸ್ಥಾನ, ವೀರನಾರಾಯಣ ದೇವಸ್ಥಾನ ಸೇರಿದಂತೆ ಅವಳಿ ನಗರದಾದ್ಯಂತ ಇರುವ ಶಿವನ ದೇವಾಲಯಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವರಾತ್ರಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಎಲ್ಲ ಶಿವ ದೇವಾಲಯಗಳು ವಿಶೇಷ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದವು.
ಉಪವಾಸ:ಬೆಳಗ್ಗೆಯೇ ದೇವರ ದರ್ಶನ ಪಡೆದ ಸಾರ್ವಜನಿಕರು ಸಂಜೆಯವರೆಗೂ ಉಪವಾಸ ವೃತ ಮಾಡಿ ಸಂಜೆಯಾಗುತ್ತಿದ್ದಂತೆ ಮತ್ತೆ ಶಿವನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ, ದೇವರಿಗೆ ವಿವಿಧ ನಮೂನೆಗಳ ಹಣ್ಣು, ವಿಶೇಷ ಸಿಹಿ ತಿನಿಸುಗಳನ್ನು ಎಡೆ ಮಾಡಿದ ನಂತರ ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಹಾಗೂ ತಂಪು ಪಾನೀಯಗಳನ್ನು ಕುಡಿಯುವ ಮೂಲಕ ತಮ್ಮ ಉಪವಾಸ ವೃತ ಪೂರ್ಣಗೊಳಿಸಿದರು.
ಪ್ರವಾಸ ವ್ಯವಸ್ಥೆ:ಪ್ರತಿಯೊಂದು ದೇವಾಲಯಗಳಲ್ಲಿಯೂ ಆಗಮಿಸುವ ಭಕ್ತರಿಗೆ ನಾಲ್ಕೈದು ವಿವಿಧ ಹಣ್ಣುಗಳಿಂದ ತಯಾರಿಸಿದ ಪ್ರಸಾದ ಮತ್ತು ತಂಪು ಪಾನೀಯ ವಿತರಿಸಲಾಯಿತು. ರಾತ್ರಿಯಲ್ಲ ಶಿವ ಜಾಗರಣೆಗಾಗಿ ವಿಶೇಷ ಭಜನಾ ವ್ಯವಸ್ಥೆ ಕೂಡಾ ಕಲ್ಪಿಸಲಾಗಿತ್ತು.