ದ.ಕ. ಜಿಲ್ಲಾದ್ಯಂತ ಶಿವರಾತ್ರಿ ಸಡಗರ

KannadaprabhaNewsNetwork |  
Published : Feb 16, 2026, 02:30 AM IST
ಕದ್ರಿ ದೇವಾಲಯದಲ್ಲಿ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿರುವ ದೇವರು. | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾನುವಾರ ಶಿವರಾತ್ರಿಯ ಸಡಗರ. ಜಿಲ್ಲೆಯ ಪ್ರಮುಖ ಶಿವ ದೇವಾಲಯಗಳು, ಭಜನಾ ಮಂದಿರಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಶಿವರಾತ್ರಿ ಮಹೋತ್ಸವ ಸಂಭ್ರಮದಿಂದ ನೆರವೇರಿತು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾನುವಾರ ಶಿವರಾತ್ರಿಯ ಸಡಗರ. ಜಿಲ್ಲೆಯ ಪ್ರಮುಖ ಶಿವ ದೇವಾಲಯಗಳು, ಭಜನಾ ಮಂದಿರಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಶಿವರಾತ್ರಿ ಮಹೋತ್ಸವ ಸಂಭ್ರಮದಿಂದ ನೆರವೇರಿತು.

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ನರಹರಿ ಪರ್ವತ ದೇವಾಲಯ, ಕಾರಿಂಜೇಶ್ವರ ದೇವಸ್ಥಾನ, ಪಣಂಬೂರು ನಂದನೇಶ್ವರ ದೇವಸ್ಥಾನ, ಕಾವೂರು ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹೆಚ್ಚಿನ ದೇವಾಲಯಗಳಲ್ಲಿ ಶಿವರಾತ್ರಿ ಉಪವಾಸ, ಜಾಗರಣೆ ಕುಳಿತು ಭಕ್ತರು ಶಿವಧ್ಯಾನದಲ್ಲಿ ಲೀನವಾದರು.

ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನಗಳಿಗೆ ತೆರಳಿ ರುದ್ರಾಭಿಷೇಕ, ಶಿವ ದೇವರಿಗೆ ಪ್ರಿಯವಾದ ಬಿಲ್ವಾರ್ಚನೆ ನೆರವೇರಿಸಿದರು. ಜತೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡರು.ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿತು. ದಿನವಿಡೀ ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ರುದ್ರಾಭಿಷೇಕ ಸಹಿತ ವಿವಿಧ ಪೂಜೆ ಸಲ್ಲಿಸಿದರು. ಅಲ್ಲಿನ ಕೆರೆಗಳಲ್ಲಿ ಪವಿತ್ರ ಸ್ನಾನ ಮಾಡಿ, ಕೆರೆಯ ಮೇಲ್ಭಾಗದಲ್ಲಿರುವ ಶಿವಲಿಂಗಕ್ಕೆ ಜಲಾಭಿಷೇಕ, ಹಾಲಿನ ಅಭಿಷೇಕ ಮಾಡಿದರು. ಬಿಲ್ವಪತ್ರೆ ಅರ್ಪಿಸಿ ಪೂಜೆ ಸಲ್ಲಿಸಿದರು. ಇಲ್ಲಿನ ಶಿವಲಿಂಗವನ್ನು ಸ್ಪರ್ಶಿಸಿ ಭಕ್ತರಿಗೆ ಸ್ವತಃ ಅಭಿಷೇಕ ಸಲ್ಲಿಸಲು ಅವಕಾಶ ಇರುವುದರಿಂದ ಭಕ್ತರ ಸಂಖ್ಯೆ ದೊಡ್ಡದಿತ್ತು. ಸರತಿ ಸಾಲಿನಲ್ಲಿ ನಿಂತು ಗೋಮುಖ ತೀರ್ಥವನ್ನು ಪಡೆದು ಶಿವಲಿಂಗಕ್ಕೆ ಅಭಿಷೇಕ ಮಾಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಬೆಳಗ್ಗೆ ಉಮಾಮಹೇಶ್ವರ ಹೋಮ, ಮಹಾರುದ್ರಾಭಿಷೇಕ, ಶತಸೀಯಾಳಾಭಿಷೇಕ ನಡೆಯಿತು. 12.15ಕ್ಕೆ ಮಹಾಪೂಜೆ, ರಾತ್ರಿ ಸೇವಾ ರಥೋತ್ಸವ, ವಿಷ್ಣುಬಲಿ ಉತ್ಸವ ಮತ್ತು ರಥೋತ್ಸವ, ರಾತ್ರಿ 1 ಗಂಟೆಗೆ ಶಿವಬಲಿ, ಮಹಾ ಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ ನಡೆಯಿತು.

ಜಾಗರಣೆ ಅಂಗವಾಗಿ ದೇವಸ್ಥಾನಗಳಲ್ಲಿ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕಲಿಕೆ ಪ್ರದರ್ಶನಕ್ಕೆ ಕಲಿಕಾ ಹಬ್ಬ ವೇದಿಕೆ: ಬಿಇಒ ನಾಣಿಕಿ ನಾಯ್ಕ
ಹಂಪಿ ಉತ್ಸವದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ