ಗದಗ: ಮಹಿಳೆಯರು ಸ್ವಾವಲಂಬಿಗಳಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ತಿಳಿಸಿದರು.
ಈ ಹಿಂದೆ ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಸೇರಲು ಮತ್ತು ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುವ ಕಾಲ ಇತ್ತು. ಆದರೆ ಈಗ ಕಾಲ ಬದಲಾಗಿದ್ದು, ಸ್ವ- ಸಹಾಯಗುಂಪುಗಳಲ್ಲಿ ಸಕ್ರಿಯವಾಗಿ ಮಹಿಳೆಯರು ಪಾಲ್ಗೊಂಡು ವಿವಿಧ ಸಾಲ ಸೌಲಭ್ಯಳನ್ನು ಪಡೆದುಕೊಳ್ಳುವ ಮೂಲಕ ಕುಟುಂಬದ ಆದಾಯ ವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ. ತರಬೇತಿಯಲ್ಲಿ ನೀಡುವ ಮಾಹಿತಿ ಪಡೆದು ಗ್ರಾಮೀಣ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದರು. ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಗ್ರಾಮೀಣ ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದಿರುವ ಹಲವಾರು ಕಾರ್ಯಕ್ರಮಗಳಲ್ಲಿ ಎನ್ಆರ್‌ಎಲ್‌ಎಂ ಯೋಜನೆಯು ಅತ್ಯಂತ ಪ್ರಮುಖವಾಗಿದ್ದು, ಯೋಜನೆಯಲ್ಲಿರುವ ಸೌಲಭ್ಯಗಳನ್ನು ಪಡೆದು ಬಡತನದಿಂದ ಹೊರಬರಲು ಸಂಘಟಿತ ಪ್ರಯತ್ನ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಗಿರೀಶ ಕಬಾಡರ್, ಮಧುಮತಿ ಪಾಟೀಲ್, ಮಡ್ಡೆಪ್ಪ ಮಲ್ಲಿಮಾರ್ ತರಬೇತಿ ನೀಡಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಘುನಾಥಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವ್ಯವಸ್ಥಾಪಕ ಬಸವರಾಜ ಮೂಲಿಮನಿ ನಿರೂಪಿಸಿ, ವಂದಿಸಿದರು.