ಕಾರವಾರ: ತಾಲೂಕಿನ ಶೇಜವಾಡದ ಶೆಜ್ಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಇಂದಿನಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದೆ.
ಮಹಾ ಶಿವರಾತ್ರಿ ನಿಮಿತ್ತ ಬುಧವಾರ ಬೆಳಗ್ಗೆಯಿಂದ ಸಂಜೆ ೬ಗಂಟೆಯವರೆಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ರಾತ್ರಿ ೭ಗಂಟೆಯಿಂದ ಲೋಕ ಕಲ್ಯಾಣರ್ಥಕ್ಕಾಗಿ ಶತರುದ್ರಾಭಿಷೇಕ ನಡೆಯಲಿದೆ.ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದ್ದು, ಜಿಲ್ಲಾಧಿಕಾರಿ ಕಾರ್ಯಾಲಯದ ಆದೇಶದ ಪ್ರಕಾರ ಮಹಾ ಶಿವರಾತ್ರಿಯ ದಿನ ಪೂರ್ತಿ ರಾತ್ರಿ ದೇವಸ್ಥಾನ ತೆರೆದಿಟ್ಟು ಜಾಗರಣೆ ಮಾಡಲಾಗುತ್ತದೆ.ಫೆ. ೨೭ರಂದು ಬೆಳಗ್ಗೆ ೭ಗಂಟೆಗೆ ಸಮುದ್ರ ಸ್ನಾನಕ್ಕೆ ಪಲ್ಲಕ್ಕಿಯ ಮೂಲಕ ಶ್ರೀದೇವರು ತೆರಳಲಿದ್ದು, ಮರಳಿದ ಬಳಿಕ ದೇವಾಲಯದಲ್ಲಿ ಮಧ್ಯಾಹ್ನ ಪೂಜೆಯಿದೆ. ರಾತ್ರಿ ಶ್ರೀ ದೇವರ ಪಲ್ಲಕ್ಕಿ ಮೆರವಣಿಗೆ, ರಂಗ ಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿವೆ.
ಫೆ. ೨೮ ರಂದು ಮಧ್ಯಾಹ್ನ ೧.೩೦ಗಂಟೆಗೆ ಹೋಮ ಹವನ, ಸಂಜೆ ೫ ಗಂಟೆಗೆ ರಥಾರೋಹಣ, ಶ್ರೀದೇವರಿಗೆ ಹಣ್ಣು ಕಾಯಿ ಸೇವೆ, ದರ್ಶನ, ಕಾಣಿಕೆ ಸಲ್ಲಿಸುವುದು, ರಾತ್ರಿ ೭.೩೦ ರಿಂದ ಸಂಗೀತ ಕಾರ್ಯಕ್ರಮ, ೧೦ಗಂಟೆಗೆ ದೇವಸ್ಥಾನದ ಪಂಚವಾದ್ಯದೊಂದಿಗೆ ಹಿಲಾಮತಿ ಮೆರವಣಿಗೆ ನಂತರ ಶ್ರೀದೇವರ ಫಲಪುಷ್ಪ ಲೀಲಾವು ನಂತರ ನಾಟ್ಯ ರಾಣಿ ಭರತ ನಾಟ್ಯ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತ ನಾಟ್ಯ, ರಾತ್ರಿ ೧೧.೩೦ ಗಂಟೆಗೆ ಶಪಥ ತುಕಾ ಹ್ಯಾ ಮಂಗಳಸೂತ್ರಾಚೆ ಕೊಂಕಣಿ ನಾಟಕ ನಡೆಯಲಿದೆ. ಮಾ. ೧ ರಂದು ಬೆಳಗ್ಗೆ ೪ ಗಂಟೆಗೆ ರಥೋತ್ಸವ ನಡೆಯಲಿದೆ. ಸಂಜೆ ೪ ಗಂಟೆಗೆ ಶ್ರೀ ದೇವರ ಅವಭೃತ ಸ್ನಾನ (ಓಕುಳಿ), ಪಲ್ಲಕ್ಕಿ ಮೆರವಣಿಗೆ, ಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ರಾತ್ರಿ ೯ಗಂಟೆಗೆ ಓಎಚ್‌ಬಿ ಎವೆಂಟ್ಸ್ ಹೊನ್ನಾವರ ಇವರಿಂದ ನೃತ್ಯ ಸಂಗಮ ಕಾರ್ಯಕ್ರಮವಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥಾಪನಾ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.