ದೊಡ್ಡಕಾಡನೂರು ಗ್ರಾಮದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೧೧ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್. ಎಸ್. ಸಿದ್ಧಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು. ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ ಮೈಸೂರಿನಲ್ಲಿ ಇರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಬೆಳೆದು ಪ್ರಖ್ಯಾತಿ ಪಡೆಯಲು ಸಾಧ್ಯವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ ಮೈಸೂರಿನಲ್ಲಿ ಇರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಬೆಳೆದು ಪ್ರಖ್ಯಾತಿ ಪಡೆಯಲು ಸಾಧ್ಯವಾಗಿದೆ ಎಂದು ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್. ಎಸ್. ಸಿದ್ಧಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ದೊಡ್ಡಕಾಡನೂರು ಗ್ರಾಮದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೧೧ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಡವಿದ್ಯಾರ್ಥಿಗಳ ಹಸಿವಿನ ಬಗ್ಗೆ ಅರಿವಿದ್ದ ಶ್ರೀಗಳು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಸ್ಟೆಲ್ ತೆರೆದು ಊಟದ ವ್ಯವಸ್ಥೆ ಮಾಡುತ್ತಾರೆ. ಅಂದಿನ ಕಾಲದಲ್ಲಿ ಸುತ್ತೂರು ಮಠ ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿರುತ್ತದೆ. ಒಂದು ದಿನ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿಸಲು ಆಹಾರ ಪದಾರ್ಥಗಳು ಇಲ್ಲದಿದ್ದಾಗ, ಅವರು ಧರಿಸಿದ್ದ ಚಿನ್ನದ ಕರಡಿಗೆಯನ್ನು ಮಾರಿ ಪ್ರಸಾದ ವ್ಯವಸ್ಥೆ ಮಾಡುತ್ತಾರೆ. ಇಷ್ಟು ತೊಂದರೆ ಇದ್ದರೂ ಕೂಡ ನಂತರ ಜೆಎಸ್‌ಎಸ್ ಪ್ರೌಢಶಾಲೆ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠ ಪ್ರಾರಂಭ ಮಾಡುತ್ತಾರೆ. ಆ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಹಲವಾರು ಬಡ ವಿದ್ಯಾರ್ಥಿಗಳಿಗೆ ಅನ್ನದಾಸೋಹ, ಅಕ್ಷರ ದಾಸೋಹ ನೀಡುತ್ತಾ, ಸಹಸ್ರಾರು ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ನೆರಳಾಗುತ್ತಾರೆ. ಅಂದು ರಾಜೇಂದ್ರ ಶ್ರೀಗಳವರಿಂದ ಪ್ರಾರಂಭವಾದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು, ಇಂದು ಭಾರತ ಮಾತ್ರವಲ್ಲ. ವಿದೇಶಗಳಲ್ಲಿಯೂ ವಿಸ್ತರಿಕೊಂಡಿದೆ. ಇದಕ್ಕೆ ಈಗಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಪರಿಶ್ರಮವೇ ಕಾರಣ ಎಂದು ತಿಳಿಸಿದರು. ತಾಲೂಕಿನ ತೇಜೂರು ಶ್ರೀ ಸಿದ್ಧರಾಮೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಕಲ್ಯಾಣಸ್ವಾಮಿಜೀ ಅವರು ವೇದಿಕೆಯ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ರಾಜೇಂದ್ರ ಸ್ವಾಮೀಜಿ ಅವರ ಭಾವಚಿತ್ರವನ್ನಿಟ್ಟು, ದೊಡ್ಡಕಾಡನೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಸಾಗಿದ ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರು ಕಳಸ ಹೊತ್ತು ಸಾಲಾಗಿ ಸಾಗಿದರು, ಬ್ಯಾಂಡ್‌ಸೆಟ್ ನಾದಕ್ಕೆ ಶ್ರೀಮಠದ ಭಕ್ತರು ಮತ್ತು ವಿದ್ಯಾರ್ಥಿಗಳು ಕುಣಿದು ಸಂತಸ ವ್ಯಕ್ತಪಡಿಸಿದರು. ೨೦೨೫-೨೬ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದ ದ್ವಿತೀಯ ಪಿಯುಸಿಯ ವರ್ಷಿತಾ ಎಚ್ ಎಲ್ ಹಾಗೂ ಎಸ್‌ಎಸ್‌ಎಲ್‌ಸಿಯ ಲಾವಣ್ಯ ಮತ್ತು ಚಾರು ಅವರಿಗೆ ಸನ್ಮಾನ ಮಾಡಲಾಯಿತು. ಪಿಯುಸಿ ವಿದ್ಯಾರ್ಥಿನಿ ಸುಮಾ ಮತ್ತು ತಂಡದವರ ಪ್ರಾರ್ಥಸಿದರು. ಕನ್ನಡ ಶಿಕ್ಷಕ ಲೋಕೇಶ್ ಸ್ವಾಗತಿಸಿದರು, ಮುಖ್ಯಶಿಕ್ಷಕ ಸುರೇಶ್ ಪಿ ವಂದಿಸಿದರು. ಇತಿಹಾಸ ಉಪನ್ಯಾಸಕ ಸೋಮಣ್ಣ ಎಂ ನಿರೂಪಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಮ್ಮ, ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ, ಉಪನ್ಯಾಸಕರಾದ ಪುಟ್ಟಮಾದಪ್ಪ, ರೇಣುಕಾ ತಿಗರೇರ ಹಾಗೂ ಮಹದೇವಸ್ವಾಮಿ, ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಕೊಂಡ್ಲಯ್ಯ, ಮುಖಂಡರಾದ ತೇಜುಸ್ವಾಮಿ, ಕುಮಾರ್, ರವಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.