ಅಧ್ಯಾತ್ಮ ಲೋಕದ ಧ್ರುವತಾರೆ ಶಿವಸಂಗಮೇಶ್ವರ ಶ್ರೀ ಲಿಂಗೈಕ್ಯ

KannadaprabhaNewsNetwork |  
Published : May 29, 2025, 01:31 AM IST
28ಕೆಕೆಆರ್3:ಕುಕನೂರು ತಾಲೂಕಿನ ಬೆದವಟ್ಟಿ ಹಿರೇಮಠದ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರು ಲಿಂಗೈಕ್ಯರಾದ ಹಿನ್ನಲೆ ಮಾಜಿ ಸಚಿವ ಹಾಲಪ್ಪ ಆಚಾರ್ ಮಠಕ್ಕೆ ಬೇಟಿ ನೀಡಿ ಶ್ರಿಗಳಿಗೆ ನಮನ ಸಲ್ಲಿಸಿದರು.  | Kannada Prabha

ಸಾರಾಂಶ

ಆಧ್ಯಾತ್ಮೀಕತೆ, ಸಾಮಾಜಿಕ ಪರಿಕಲ್ಪನೆ ಜತೆಗೆ ಶೈಕ್ಷಣಿಕ, ಸಾಂಸ್ಕೃತಿಕ ವೈಚಾರಿಕತೆಯನ್ನು ಪಸರಿಸಿದ ಹಿರಿಮೆ ಶ್ರೀಗಳದು. ಧಾರ್ಮಿಕತೆ, ತಾತ್ವಿಕ ತಳಹದಿಯನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಿದ್ದರು.

ಕುಕನೂರು:

ತಾಲೂಕಿನ ವೇದವಟ್ಟಿ ಎಂದೇ ಹೆಸರಾದ ಬೆದವಟ್ಟಿ ಗ್ರಾಮದ ಹಿರೇಮಠದ 10ನೇ ಪೀಠಾಧೀಪತಿ, ಅಧ್ಯಾತ್ಮ ಲೋಕದ ಧ್ರುವತಾರೆ ಶಿವಸಂಗಮೇಶ್ವರ ಶಿವಾಚಾರ್ಯರು (80) ಬುಧವಾರ ಲಿಂಗೈಕ್ಯರಾದರು.

ಆಧ್ಯಾತ್ಮೀಕತೆ, ಸಾಮಾಜಿಕ ಪರಿಕಲ್ಪನೆ ಜತೆಗೆ ಶೈಕ್ಷಣಿಕ, ಸಾಂಸ್ಕೃತಿಕ ವೈಚಾರಿಕತೆಯನ್ನು ಪಸರಿಸಿದ ಹಿರಿಮೆ ಶ್ರೀಗಳದು. ಧಾರ್ಮಿಕತೆ, ತಾತ್ವಿಕ ತಳಹದಿಯನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಿದ್ದರು. ತಮ್ಮ ಜೀವಾತಾವಧಿಯಲ್ಲಿ 1600ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ನೂತನ ದೇವಸ್ಥಾನ ಹಾಗೂ ಗೋಪುರಗಳ ಉದ್ಘಾಟನೆಯನ್ನು ಬಹುತೇಕವಾಗಿ ಶಿವಸಂಗಮೇಶ್ವರ ಶಿವಾಚಾರ್ಯರೇ ಮಾಡಿದ್ದಾರೆ.1970ರ ದಶಕದಲ್ಲಿ ಬೆದವಟ್ಟಿ ಹಿರೇಮಠದ ಪೀಠಾಧೀಪತಿಗಳಾದ ಇವರು, 1996ರಲ್ಲಿ ಬೆದವಟ್ಟಿಯಲ್ಲಿ ಲಕ್ಷ ದೀಪೋತ್ಸವ ಮಾಡಿದರು. 1993ರಿಂದ ಮಠದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿದ್ದರು. 1996ರಲ್ಲಿ ಬೆದವಟ್ಟಿಗೆ ಪಂಚಪೀಠಾಧೀಪತಿಗಳನ್ನು ಕರೆಯಿಸಿ 300 ಜೋಡಿ ಸಾಮೂಹಿಕ ವಿವಾಹ ಮಾಡಿಕೊಟ್ಟರು. ಅಂದು ನೆರೆದಿದ್ದ ಸಾವಿರಾರು ಭಕ್ತರಿಗೆ ಮಾದಲಿ ಮಾಡಿಸಿ 1008 ಕೆಜಿ ತುಪ್ಪವನ್ನು ಭಕ್ತರ ಸಹಕಾರದಲ್ಲಿ ಬಡಿಸಿದ್ದರು. 2018ರಲ್ಲಿ ಮಠಕ್ಕೆ ನೂತನ ರಥ ನಿರ್ಮಿಸಿ ರಥೋತ್ಸವ ನೆರವೇರಿಸಿದರು. ಪ್ರತಿವರ್ಷ ಜಂಗಮ ವಟುಗಳಿಗೆ ದೀಕ್ಷಾ, ಪುರಾಣ ಪ್ರವಚನ ನೆರವೇರಿಸಿದ್ದಾರೆ. ಅನೇಕ ಮಕ್ಕಳಿಗೆ ಮಠದಲ್ಲಿ ವಿದ್ಯಾದಾನ ಮಾಡಿದ್ದಾರೆ.

ಲಿಂಗಪೂಜೆ ಪ್ರೀಯರು:

ಶ್ರೀಗಳು ನಿತ್ಯ ಮೂರು ಹೊತ್ತು ಲಿಂಗಪೂಜೆ ಮಾಡುತ್ತಿದ್ದರು. ಯಾವುದೇ ಕಾರ್ಯಕ್ರಮವಿರಲಿ ಶ್ರೀಗಳು ಲಿಂಗಪೂಜೆಗೆ ಆದ್ಯತೆ ನೀಡುತ್ತಿದ್ದರು. ಧಾರ್ಮಿಕ ಚಟುವಟಿಕೆಯ ಶಿರೋಮಣಿಯಾಗಿದ್ದ ಶ್ರೀಗಳನ್ನು ಜನಸಾಮಾನ್ಯರ ಸ್ವಾಮೀಜಿ ಎಂದೇ ಬಣ್ಣಿಸಲಾಗುತ್ತಿತ್ತು.

ಇಂದು ಅಂತ್ಯಕ್ರಿಯೆ:

ಗುರುವಾರ ಬೆಳಗ್ಗೆ 12 ಗಂಟೆಗೆ ಹಿರೇಮಠದಲ್ಲಿ ಶ್ರೀಗಳ ಅಂತ್ಯಕ್ರಿಯೆ ಜರುಗಲಿದ್ದು ಅದಕ್ಕೂ ಮೊದಲು ಭಕ್ತರಿಗೆ ದರ್ಶನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರ, ಸ್ವಾಮೀಜಿಗಳ ಕಂಬನಿ:

ಶ್ರೀಗಳು ಲಿಂಗೈಕ್ಯರಾದ ಸುದ್ದಿ ಕೇಳಿ ಬುಧವಾರ ಬೆದವಟ್ಟಿ ಗ್ರಾಮಕ್ಕೆ ಅಪಾರ ಭಕ್ತಗಣ ಆಗಮಿಸಿತು. ನಾನಾ ಗ್ರಾಮಗಳಿಂದ ಜನರು ಮಠಕ್ಕೆ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಸ್ವಾಮೀಜಿಗಳು ಆಗಮಿಸಿದ್ದು, ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಸಚಿವ ಹಾಲಪ್ಪ ಆಚಾರ್ ಬುಧವಾರ ಬೆದವಟ್ಟಿಗೆ ಭೇಟಿ ನೀಡಿ ಶ್ರೀಗಳ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಶಿವಸಂಗಮೇಶ್ವರ ಶಿವಾಚಾರ್ಯರು ಈ ಭಾಗದ ಭಕ್ತರ ಆರಾಧ್ಯ ದೇವರಾಗಿದ್ದಾರೆ. ಶ್ರೀಗಳ ಅಗಲಿಕೆಯಿಂದ ಭಕ್ತರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಭಕ್ತರ ಹಿತಕ್ಕಾಗಿ ಶ್ರೀಗಳು ಬಾಳಿದರು. ಈ ಭಾಗದಲ್ಲಿ ಭಕ್ತಿ, ಆಧ್ಯಾತ್ಮೀಕ ಕಾರ್ಯಗಳಿಗೆ ಶ್ರೀಗಳೇ ಶ್ರೀಕಾರರಾಗಿದ್ದರು. ಅವರು ಸದಾ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.

ಹಾಲಪ್ಪ ಆಚಾರ್, ಮಾಜಿ ಸಚಿವ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ