ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಾಲ್ಯ ವಿವಾಹ ಮಾಡಬಾರದೆಂದು ಕಾನೂನಿನ ಅರಿವಿದ್ದರೂ ಜೈಲು ಶಿಕ್ಷೆ ವಿಧಿಸುತ್ತಾರೆ ಎಂದು ತಿಳಿದಿದ್ದರೂ ಕೆಲವರು ಬಾಲ್ಯ ವಿವಾಹವನ್ನು ಮಾಡುತ್ತಾರೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಜಿ. ಸತೀಶ್ ಹೇಳಿದರು.ಹುಲ್ಲಹಳ್ಳಿಯ ಶಿವಕುಮಾರ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಆಯೋಜಿಸಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆಯುವ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಬಾಲ್ಯ ವಿವಾಹ ನಡೆದು, ಅದರಲ್ಲಿ ಭಾಗವಹಿಸಿದ ತಂದೆ, ತಾಯಿ, ಪುರೋಹಿತರು, ಕಲ್ಯಾಣ ಮಂಟಪದ ಮಾಲೀಕರು ಮತ್ತೆ ಅದರಲ್ಲಿ ಭಾಗವಹಿಸಿದ ಎಲ್ಲರಿಗೂ ಒಂದು ವರ್ಷ ಜೈಲು ಎರಡು ಲಕ್ಷದವರೆಗೆ ಶಿಕ್ಷೆಯನ್ನು ಗುರಿಪಡಿಸಲಾಗುತ್ತದೆ ಎಂದು ಹೇಳಿದರು. ಹೆಣ್ಣು ಮಕ್ಕಳ ಬೆಳವಣಿಗೆಗೆ ಅವಕಾಶ ಕಲ್ಪಿಸಿ ಕೊಡಬೇಕು ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳಿದ್ದು, ಅವುಗಳ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವು ಅಗತ್ಯ ಎಂದರು.ಮಕ್ಕಳು ತಮ್ಮ ತಂದೆ ತಾಯಿ ವೃದ್ಧಾಪ್ಯದ ಸಮಯದಲ್ಲಿ ಅವರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮಕ್ಕಳ ಹೆಸರಿಗೆ ನೊಂದಾಯಿಸಿರುವ ಜಮೀನು ಹಾಗೂ ಇತರ ಆಸ್ತಿಪಾಸ್ತಿಗಳನ್ನು ವೃದ್ಯಾಪ್ಯದ ತಂದೆ ತಾಯಿಗಳು ವಾಪಸ್ ಪಡೆದುಕೊಳ್ಳಲು ಕಾನೂನುಗಳಿವೆ ಎಂದು ಅವರು ಹೇಳಿದರು.ಈ ರೀತಿ ತಮ್ಮ ತಮ್ಮ ಊರುಗಳಲ್ಲಿ ಬಹಿಷ್ಕಾರದ ಪದ್ಧತಿ ಇದ್ದರೆ ಬಹಿಷ್ಕರಿಸಿದವರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಇದೆ ಎಂದು ಹೇಳಿದರು. ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜೆ. ಶಶಿಕಲಾ ಮಾತನಾಡಿ, ಚಿಕ್ಕವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದರಿಂದ ಹೆಣ್ಣು ಮಕ್ಕಳಲ್ಲಿ ಗರ್ಭ ಬೆಳವಣಿಗೆಗಳು ಸರಿಯಾಗಿ ಆಗದೆ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಿ ಮಕ್ಕಳು ಅಂಗ ವೈಕಲ್ಯದಿಂದ ಬಳಲುತ್ತಾರೆ ಎಂದರು, ಆದ್ದರಿಂದ ಬಾಲ್ಯ ವಿವಾಹದ ಬಗ್ಗೆ ಎಲ್ಲರೂ ಅರಿವು ಮೂಡಿಸಬೇಕೆಂದು ಕರೆ ನೀಡಿದರು.ಮುಖ್ಯಅತಿಥಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿದರು.ವಕೀಲರಾದ ಮಹಾದೇವಸ್ವಾಮಿ, ಕೆಂಪರಾಜು, ಬಸವಣ್ಣ, ಶ್ರೀಕಂಠಪ್ರಸಾದ್, ಮುತ್ತುರಾಜ್, ಪ್ರಸನ್ನ, ಹುಲ್ಲಹಳ್ಳಿ ತಾಲೂಕು ಯೋಜನಾಧಿಕಾರಿ ಗಣೇಶ್ ನಾಯಕ್, ಅಧ್ಯಕ್ಷ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ. ವರದರಾಜು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಬೃಂದಾ, ಅಕ್ಷತಾ, ಚಾಂದಿನಿ, ದಿವ್ಯ, ತಾಲೂಕಿನ ಎಲ್ಲ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ, ಜ್ಞಾನ ವಿಕಾಸದ ಸೇವಾ ಪ್ರತಿನಿಧಿಗಳು ಹಾಗೂ ಎಲ್ಲ ಕೇಂದ್ರದ ಸದಸ್ಯರು ಇದ್ದರು.ಮಹಿಳೆಯರಿಗೆ ರಂಗೋಲಿ ಸ್ಪರ್ಧೆ. ಪುಷ್ಪ ಗುಂಚ ಸ್ಪರ್ಧೆ. ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.