ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಶಿವಲೀಲಾ ಕುಲಕರ್ಣಿ ಸ್ಪಷ್ಟನೆ

KannadaprabhaNewsNetwork |  
Published : Feb 13, 2024, 12:51 AM IST
12ಡಿಡಬ್ಲೂಡಿ10ಶಿವಲೀಲಾ ಕುಲಕರ್ಣಿ | Kannada Prabha

ಸಾರಾಂಶ

ಚುನಾವಣೆ ಸಮಯದಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರವಾಡ: ಅಭಿವೃದ್ಧಿ ಸಹಿಸದೇ ತಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು ಮೊಸರಿನಲ್ಲಿ ಕಲ್ಲು ಹುಡುಕುವ ದುಷ್ಟ ಶಕ್ತಿಗಳಿಗೆ ಹೆದರುವುದಿಲ್ಲ ಎಂದು ವೈಶುದೀಪ ಫೌಂಡೇಶನ್‌ ಮುಖ್ಯಸ್ಥರು, ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.

ಕೋಳಿಕೆರೆ ಹೂಳು ಎತ್ತುವ ವಿಷಯವಾಗಿ ಪಾಲಿಕೆ ಸದಸ್ಯ ಶಂಕರ ಶೆಳಕೆ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಅವರು, ಹೂಳೆತ್ತುವ ಕಾರ್ಯಕ್ಕೆ ಶೆಳಕೆ ಅವರು ಅಡ್ಡಿ ಪಡಿಸಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ರೈತರ ಹಿತದೃಷ್ಟಿಯಿಂದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೋಳಿಕೆರೆಯನ್ನು ಸ್ವಚ್ಛ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದಿದ್ದಾರೆ.

ಇಷ್ಟು ದಿನಗಳ ಕಾಲ ಈ ಕೆರೆಯ ಮೇಲೆ ರಾಜಕಾರಣ ಮಾಡಿದ ಬಿಜೆಪಿ ಇದೀಗ ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಮತ್ತೆ ನಮ್ಮ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುತ್ತಿದೆ. ಕೆರೆಯಲ್ಲಿನ ಹೂಳನ್ನು ರೈತರು ಸ್ವಯಂ ಪ್ರೇರಿತರಾಗಿ ಒಯ್ಯುತ್ತಿದ್ದಾರೆ ಎಂದು ಸ್ಪಷ್ಪಪಡಿಸಿದ ಅವರು, ಸ್ವ ಇಚ್ಛೆಯಿಂದ ಹೂಳೆತ್ತುವ ಕಾರ್ಯ ಕೈಗೊಂಡಿದ್ದು ಕೆಲವರಿಗೆ ಇರುಸು ಮುರುಸಾಗಿದೆ. ಚುನಾವಣೆ ಸಂಧರ್ಭದಲ್ಲಿ ಮಾತ್ರ ರಾಜಕಾರಣ ಮಾಡೋಣ ಅಭಿವೃದ್ಧಿ ಮಾಡುವಾಗ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಮಾಡುವುದು ನಮ್ಮ ಗುರಿ ಎಂದು ತಿರುಗೇಟು ನೀಡಿದ್ದಾರೆ.

ಮಾಜಿ ಶಾಸಕ ಅಮೃತ ದೇಸಾಯಿ ಆರೋಪದ ಕುರಿತಂತೆ ಪ್ರತಿಕ್ರಿಯಿಸಿರುವ ವೈಶುದೀಪ ಫೌಂಡೇಶನ್‌ ಮುಖ್ಯಸ್ಥೆ ಶಿವಲೀಲಾ ಕುಲಕರ್ಣಿ, ಸರ್ಕಾರದ ಅಧಿಕೃತ ಯಾವುದೇ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಶಾಸಕರ ಪರವಾಗಿ ಉದ್ಘಾಟನೆ ಹಾಗೂ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡುವಾಗ ಅಭಿಮಾನದಿಂದ ನನಗೂ ಕರೆದಾಗ ಅವರಲ್ಲಿ ಒಬ್ಬರಾಗಿ ಪೂಜೆಯಲ್ಲಿ ಭಾಗಿಯಾಗಿರುತ್ತೇನೆ. ಬಿಜೆಪಿ ಮುಖಂಡರು ಅನಾವಶ್ಯಕವಾಗಿ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?