ಜಿಲ್ಲೆಯಾದ್ಯಂತ ಮೊಳಗಿದ ಶಿವನಾಮ ಸ್ಮರಣೆ

KannadaprabhaNewsNetwork | Published : Mar 9, 2024 1:40 AM

ಸಾರಾಂಶ

ದಾವಣಗೆರೆ ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಮಹಾ ಶಿವರಾತ್ರಿ ಆಚರಿಸಲಾಯಿತು. ಎಲ್ಲೆಡೆ ಶಿವನ ಆರಾಧನೆ, ಉಪವಾಸ, ಜಾಗರಣೆ ಸಾಂಗವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಲ್ವಪ್ರಿಯ ಶಿವನ ಆರಾಧನೆಯ ದಿನವಾದ ಈ ಮಹಾ ಶಿವರಾತ್ರಿಯನ್ನು ಶುಕ್ರವಾರ ದಾವಣಗೆರೆ ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.

ಈ ಮಹಾ ಶಿವರಾತ್ರಿಯ ದಿನ ಶಿವನ ಆರಾಧನೆ, ಉಪವಾಸ, ಜಾಗರಣೆ ಮಾಡಲಾಗುತ್ತದೆ. ಇಂದು ಬರೀ ಹಣ್ಣು, ಹಂಪಲು ತಿಂಡಿಗಳನ್ನು ಮಾತ್ರ ಶಿವನಿಗೆ ನೈವೇದ್ಯ ಮಾಡಿ ಸೇವನೆ ಮಾಡುತ್ತಾರೆ. ಸಂಜೆ ಮನೆಗಳಲ್ಲಿಯೂ ಸಹಾ ತಮ್ಮ ಕುಟುಂಬದ ಸದಸ್ಯರುಗಳು ತಮ್ಮ ಇಷ್ಟಲಿಂಗವನ್ನು ಕೈಯಲ್ಲಿರಿಸಿಕೊಂಡು ವಿವಿಧ ಬಗೆಯ ರುದ್ರಾಭಿಷೇಕ ಮಾಡಿ, ಪುಷ್ಪ ಅರ್ಪಿಸಿ ನೈವೇದ್ಯವನ್ನು ಮಾಡಿ ತಾವು ಸ್ವೀಕರಿಸಿದರು.

ಶಿವರಾತ್ರಿಯಂದು ಶಿವಭಕ್ತರು ಸೂರ್ಯೋದಯದ ಮೊದಲು ಸ್ನಾನ ಮಾಡಿ, ಮನೆಯಲ್ಲಿ ಶಿವನಿಗೆ ಪೂಜೆ ಸಲ್ಲಿಸಿ, ಶಿವನಿಗೆ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ ಜಾಗರಣೆ, ಬಿಲ್ವಾರ್ಚನೆ, ಶಿವನಿಗೆ ಅಭಿಷೇಕ ಇವೆಲ್ಲವನ್ನೂ ಮಾಡುವುದರಿಂದ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದರಂತೆ ಭಕ್ತರು ಮುಂಜಾನೆಯಿಂದಲೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿವಾಲಯಗಳಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ಇಲ್ಲಿನ ವಿದ್ಯಾನಗರದ ಶಿವ ಪಾರ್ವತಿ ದೇವಾಲಯ, ಗೀತಾಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ಲಿಂಗೇಶ್ವರ ದೇವಸ್ಥಾನ, ವಿನೋಬನಗರದ ಶ್ರೀ ಶಂಭು ಲಿಂಗೇಶ್ವರ ಸ್ವಾಮಿ ದೇವಸ್ಥಾನ, ಪಿ.ಜೆ.ಬಡಾವಣೆಯ ಕಾಶಿ ವಿಶ್ವನಾಥ ದೇವಸ್ಥಾನ, ಸಾಯಿ ಮಂದಿರದಲ್ಲಿರುವ ಸಾಯೀಶ್ವರ ಲಿಂಗಕ್ಕೆ ಸಾರ್ವಜನಿಕರಿಗೆ ರುದ್ರಾಭಿಷೇಕ ಮಾಡಲು ಅವಕಾಶ ನೀಡಲಾಗಿತ್ತು. ಇಲ್ಲಿನ ಕೆಟಿಜೆ ನಗರ, ಬಂಬೂ ಬಜಾರ್, ಹಗೇದಿಬ್ಬ ಸರ್ಕಲ್‌ನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಜಯದೇವ ವೃತ್ತದಲ್ಲಿರುವ ಶಂಕರ ಮಠದಲ್ಲಿ ಶಿವನ ಆರಾಧನೆ, ಎಸ್‌ಕೆಪಿ ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ, ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಶಿವನ ದೇವಾಲಯದಲ್ಲಿ ವಿಶೇಷ ಅಲಂಕಾರ, ಹಳೇ ಕುಂದವಾಡದ ಶ್ರೀ ಕರಿಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಹೋಮ ಹವನ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಈ ವರ್ಷವೂ ಸಹ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದರೂ ಭಕ್ತರು ಗಮನಕೊಡದೆ ಶಿವರಾತ್ರಿ ಹಬ್ಬದಲ್ಲಿ ಉಪಹಾರ, ಫಲಹಾರ ತಯಾರಿ ಮಾಡಿಕೊಂಡು ಶಿವನಿಗೆ ನೈವೇದ್ಯ ಮಾಡಿ ತಾವು ಸವಿದರು. ಮಕ್ಕಳಿಗೆ ಪರೀಕ್ಷೆ ಸಮೀಪ ಇದ್ದರೂ ಸಹಾ ಶಿವನ ನೆನೆಯುತ್ತಾ ಶಿವರಾತ್ರಿ ಹಬ್ಬ ಆಚರಿಸಿದರು.

ಕೆಲವು ದೇವಾಲಯಗಳಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಭಜನೆ ಕಾರ್ಯಕ್ರಮ, ಹರಿಕಥೆ, ಗಾಯನ, ನೃತ್ಯ ಕಾರ್ಯಕ್ರಮ ಸೇರಿದಂತೆ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.ಶ್ರೀಶ್ರೀ ಹರಿಹರೇಶ್ವರನ ಕ್ಷೇತ್ರದಲ್ಲಿ ಶಿವ ಜಪ

ಹರಿಹರ: ಕ್ಷೇತ್ರನಾಥ ಹರಿಹರೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಹಾಗೂ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನಗರದ ಭರಂಪುರದಲ್ಲಿರುವ ೧೦೮ ಲಿಂಗೇಶ್ವರ, ವಾಟರ್ ವಕ್ಲ್ಲಿರುವ ಜೋಡು ಬಸವೇಶ್ವರ, ಹೊಸ ಹರ್ಲಾಪುರದ ಬಸವೇಶ್ವರ, ಪಕ್ಕಿರಸ್ವಾಮಿ ಮಠದ ದೇವಸ್ಥಾನ, ಅಮರಾವತಿ ಕಾಲೋನಿಯ ಶ್ರೀ ಶಿರಡಿ ಸಾಯಿ ಬಸವ ದೇವಸ್ಥಾನ, ಉಕ್ಕಡಗಾತ್ರಿಯ ಕರಿಬಸವೇಶ್ವರ, ಕಲ್ಲೇಶ್ವರ, ಏಕನಾಥೇಶ್ವರ, ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಇತರೆ ದೇವಾಲಯದಲ್ಲಿ ಶಿವರಾತ್ರಿ ಆಚರಣೆಗೆ ತಳಿರು ತೋರಣ, ವಿದ್ಯುತ್ ದೀಪಾಲಂಕಾರಗೊಂಡ ದೇವಾಲಯಗಳಲ್ಲಿ ಪೂಜೆ ಜರುಗಿದವು.ಹರಿಹರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೇಂದ್ರ ದಿಂದ ನಗರದಲ್ಲಿ ಶುಕ್ರವಾರ ಬೆಳಗ್ಗೆ ೧೦ಕ್ಕೆ ಜ್ಯೋತಿರ್ಲಿಂಗ ದರ್ಶನ ಶೋಭಾಯಾತ್ರೆ ಅದ್ದೂರಿಯಾಗಿ ನೆರವೇರಿತು. ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನದ ವತಿಯಿಂದ ಶಿವ ಅಷ್ಟೋತ್ತರ ಶತನಾಮಾವಳಿಯ ೨೫೦೦ ಪ್ರತಿಗಳನ್ನು ಹರಿಹರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿತರಣೆ ಮಾಡುವ ಅಭಿಯಾನವನ್ನು ನಡೆಸಲಾಯಿತು.

೧೦೮ ಶಿವಲಿಂಗಗಳಿಗೆ ಪುಷ್ಪವೃಷ್ಟಿಮಲೇಬೆನ್ನೂರು: ಮಹಾಶಿವರಾತ್ರಿ ಪ್ರಯುಕ್ತ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಲೇಬೆನ್ನೂರು ಹಾಗೂ ಸುತ್ತ ಅನೇಕ ಗ್ರಾಮಗಳಲ್ಲಿ ೧೦೮ ಶಿವಲಿಂಗಗಳ ಬೃಹತ್ ಶೋಭಾಯಾತ್ರೆ ಮತ್ತು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಲಾಯಿತು.ಬೆಳಗ್ಗೆ ೯ಗಂಟೆಗೆ ನೀರಾವರಿ ಇಲಾಖೆಯ ಮೈದಾನದಲ್ಲಿ ೧೦೮ ಶಿವಲಿಂಗಗಳ ಬೃಹತ್ ಶಾಂತಿಯಾತ್ರೆಗೆ ರಾಜಯೋಗಿನಿ ಬಿ.ಕೆ. ಮಂಜಳಾಜೀ ಚಾಲನೆ ನೀಡಿದರು.

ಪಿ.ಪಂಚಣ್ಣ, ದೊಡ್ಡ ಬಸಣ್ಣ, ರುದ್ರೇಶ್, ಯರೇಚಿಕ್ಕನಹಳ್ಳಿ ರಂಗನಾಥ್, ಬಸವರಾಜ್ ಕಲಾಲ್, ಪೂಜಾರ್ ರೇವಣಪ್ಪ ಇವರ ನೇತೃತ್ವದಲ್ಲಿ ಶೋಭಾಯಾತ್ರೆ ಕೊಮಾರನಹಳ್ಳಿ, ಹಾಲಿವಾಣ, ಹರಳಹಳ್ಳಿ, ಮಲ್ಲನಾಯಕನಹಳ್ಳಿ, ಗುಳದಹಳ್ಳಿ, ಬೂದಿಹಾಳ್, ನಿಟ್ಟೂರು, ಗ್ರಾಮಗಳಿಗೆ ತೆರಳಿ ಮಲೇಬೆನ್ನೂರಿಗೆ ಆಗಮಿಸಿದಾಗ ಹೆಲಿಕಾಪ್ಟರ್ ಮೂಲಕ ಪರಮಾತ್ಮನ ಸಂದೇಶ ಸಾರುವ ಕರಪತ್ತ ಹಾಗೂ ಪುಷ್ಪವೃಷ್ಠಿ ಮಾಡಲಾಯಿತು.

ದೇವಸ್ಥಾನಗಳಿಗೆ ಪವಿತ್ರ ಗಂಗಾಜಲ ವಿತರಣೆ

ಹರಿಹರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹರಿಹರ ನಗರ ಹಾಗೂ ತಾಲೂಕಿನ ದೇವಾಲಯಗಳಿಗೆ ಪವಿತ್ರ ಗಂಗಾಜಲವನ್ನು ತಾಲೂಕ ಆಡಳಿತದ ವತಿಯಿಂದ ವಿತರಣೆ ಮಾಡಲಾಯಿತು.

ತಾಲೂಕು ಆಡಳಿತದಿಂದ ಧಾರ್ಮಿಕ ದತ್ತಿ ಇಲಾಖೆಯ ಆದೇಶದ ಮೇರೆಗೆ ಸರಬರಾಜು ಮಾಡಲ್ಪಟ್ಟ ಪವಿತ್ರ ಗಂಗಾಜಲವನ್ನು ಮಹಾಶಿವರಾತ್ರಿ ಹಬ್ಬದ ವಿಶೇಷ ವಾಗಿ ಶುಕ್ರವಾರ ತಹಸಿಲ್ದಾರ್ ಕೆ.ಎಮ್.ಗುರುಬಸವರಾಜ್ ಮಾರ್ಗದರ್ಶನದಲ್ಲಿ ತಾಲೂಕಿನ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಿಗೆ ವಿತರಣೆ ಮಾಡಲಾಯಿತು.ನಗರದ ಇತಿಹಾಸ ಪ್ರಸಿದ್ಧ ಶ್ರೀ ಹರಿಹರೇಶ್ವರ ದೇವಸ್ಥಾನ, ಮಲೆಬೆನ್ನೂರಿನ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ಕಲ್ಲೇಶ್ವರ, ಶ್ರೀ ಏಕನಾಥೇಶ್ವರಿ ದೇವಸ್ಥಾನಗಳಿಗೆ ,ಕೊಮಾರನಹಳ್ಳಿಯ ಶ್ರೀ ರಂಗನಾಥ ದೇವಸ್ಥಾನ, ಭಾನುವಳ್ಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಶ್ರೀ ಆಂಜನೇಯ ದೇವಸ್ಥಾನ, ಶ್ರೀ ಕಲ್ಲೇಶ್ವರ ದೇವಸ್ಥಾನ, ಸಾಲಕಟ್ಟೆ ಗ್ರಾಮದ ಶ್ರೀ ಈಶ್ವರ ದೇವಸ್ಥಾನ, ಹರಗನಹಳ್ಳಿಯ ಶ್ರೀ ಆಂಜನೇಯ ದೇವಸ್ಥಾನ, ಅಮರಾವತಿಯ ಶ್ರೀ ಆಂಜನೇಯ ದೇವಸ್ಥಾನ, ಕುಂಬಳೂರಿನ ಶ್ರೀ ಆಂಜನೇಯ ದೇವಸ್ಥಾನ, ನಗರದ ಶೇರಾಪುರ ಶ್ರೀ ಆಂಜನೇಯ ಸ್ವಾಮಿ, ರೈಲ್ವೆ ಕಾಲೋನಿಯ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಗಳಿಗೆ ಪವಿತ್ರ ಗಂಗಾಜಲವನ್ನು ವಿತರಣೆ ಮಾಡಲಾಯಿತು.ಕಂದಾಯ ಇಲಾಖೆಯ ಸಂಗೀತ ಜೋಶಿ, ಆರಿಫ್, ಉಮೇಶ್, ನಾಗರಾಜ್, ಗುರುರಾಜ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share this article