ಜಿಲ್ಲೆಯಾದ್ಯಂತ ಮೊಳಗಿದ ಶಿವನಾಮ ಸ್ಮರಣೆ

KannadaprabhaNewsNetwork |  
Published : Feb 27, 2025, 12:35 AM IST
ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿ ಮತ್ತು ಬಸವಣ್ಣ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಮೇಲ್ಭಾಗದಲ್ಲಿರುವ ಶಿವಮೂರ್ತಿಗೆ ಪೂಜೆ ಸಲ್ಲಿಸಿದರು.   | Kannada Prabha

ಸಾರಾಂಶ

ಶಿವನನ್ನು ಆರಾಧಿಸುವ ಹಾಗೂ ಉಪವಾಸ ವ್ರತದ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಶಿವನನ್ನು ಆರಾಧಿಸುವ ಹಾಗೂ ಉಪವಾಸ ವ್ರತದ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಶಿವನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ವಿವಿಧ ಧಾರ್ಮಿಕ ಪೂಜೆಗಳೊಂದಿಗೆ ಶಿವನಾಮ ಸ್ಮರಣೆ ಮೊಳಗಿದವು. ನಗರದ ಬಿ.ಎಚ್. ರಸ್ತೆಯ ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರಸ್ವಾಮಿ ದೇವಾಲಯ, ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಾಲಯ, ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿ ಮತ್ತು ಬಸವಣ್ಣ ದೇವಾಲಯ, ಅಮರಜ್ಯೋತಿನಗರದ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗ, ಟಿಜಿಎಂಸಿ ಬ್ಯಾಂಕ್ ಆವರಣದ ಲಕ್ಷ್ಮೀ ದೇವಾಲಯ, ಹೊರಪೇಟೆಯ ಕಾಶಿ ವಿಶ್ವನಾಥ ದೇವಾಲಯ, ಸಿದ್ದರಾಮೇಶ್ವರ ಬಡಾವಣೆಯ ಈಶ್ವರ ದೇವಾಲಯ, ಸರಸ್ವತಿಪುರಂ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಅಮರಜ್ಯೋತಿನಗರ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗಕ್ಕೆ ಭಕ್ತಾದಿಗಳು ಮುಂಜಾನೆಯಿಂದಲೇ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಕ್ಯಾತ್ಸಂದ್ರದ ಹರಿಹರ ಕ್ಷೇತ್ರವೆಂದೇ ಪ್ರಸಿದ್ಧವಾದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ನಾಲ್ಕು ಯಾಮದ ಪೂಜೆ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.

ತಾಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವ ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ನೆರವೇರಿದವು. ಬೆಳಿಗ್ಗೆ 6.30 ರಿಂದಲೇ ವಿಶೇಷ ಪೂಜಾದಿಗಳು ನೆರವೇರಿತು. ಶ್ರೀರಾಮನಗರದ ಅಮಾನಿಕೆರೆ ಸಮೀಪವಿರುವ ಅಖಿಲ ಉಪ್ಪಾರ ಸಂಘದ ವಿದ್ಯಾಭಿವೃದ್ಧಿ ಕಟ್ಟಡದ ಮೇಲ್ಭಾಗದಲ್ಲಿರುವ ಶಿವಲಿಂಗ ಮೂರ್ತಿಗೆ ಹಾಗೂ ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿಯ ಮತ್ತು ಬಸವಣ್ಣ ದೇವಾಲಯದ ಮೇಲ್ಭಾಗದಲ್ಲಿರುವ ಶಿವನ ಬೃಹತ್ ಮೂರ್ತಿಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಈ ಎರಡು ಶಿವನಮೂರ್ತಿಗಳಿಗೆ ಪೂಜೆ ಸಲ್ಲಿಸಿ ಕಣ್ತುಂಬಿಕೊಂಡರು. ಮುಂಜಾನೆಯಿಂದಲೇ ನಗರದ ಎಲ್ಲ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಂದ ಶಿವನಾಮ ಸ್ಮರಣೆ, ಭಜನೆಗಳು ಮೊಳಗಿದವು. ರಾತ್ರಿ ಶಿವನ ದೇವಾಲಯಗಳಲ್ಲಿ ಭಜನೆ, ಶಿವಕಥೆ, ದೇವರನಾಮಗಳು ನಡೆಯಿತು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌