ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರು ಪಾದರಕ್ಷೆ ಧರಿಸಲು ಅನುಮತಿ ನೀಡಿ ಅಧಿಕೃತ ಸುತ್ತೋಲೆ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಚೇಳೂರು
ತಾಲೂಕಿನ ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳು ಕಡ್ಡಾಯವಾಗಿ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರಬೇಕು ಎಂಬ ವಿಚಿತ್ರ ನಿಯಮದ ಕುರಿತು ಸಾರ್ವಜನಿಕರಲ್ಲಿ ಉಂಟಾಗಿದ್ದ ಆಕ್ರೋಶಕ್ಕೆ ಜಿಲ್ಲಾಡಳಿತ ಕೊನೆಗೂ ಮಣಿದಿದೆ. ಈ ಪದ್ಧತಿಯಿಂದ ರೋಗಿಗಳಿಗೆ ಉಂಟಾಗುತ್ತಿದ್ದ ತೊಂದರೆ ಮತ್ತು ಸೋಂಕು ಹರಡುವ ಆತಂಕದ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರು ಪಾದರಕ್ಷೆ ಧರಿಸಲು ಅನುಮತಿ ನೀಡಿ ಅಧಿಕೃತ ಸುತ್ತೋಲೆ ಹೊರಡಿಸಿದೆ.ಕಳೆದ ಕೆಲವು ದಿನಗಳಿಂದ ಶಿವಪುರ ಆಸ್ಪತ್ರೆಗೆ ಬರುವ ರೋಗಿಗಳನ್ನು ಅಲ್ಲಿನ ಸಿಬ್ಬಂದಿ ಹಾಗೂ ವೈದ್ಯರು ಪಾದರಕ್ಷೆ ಧರಿಸದಂತೆ ತಡೆಯುತ್ತಿದ್ದರು. ಒಂದು ವೇಳೆ ರೋಗಿಗಳು ಚಪ್ಪಲಿ ಬಿಚ್ಚಲು ನಿರಾಕರಿಸಿದರೆ ಚಿಕಿತ್ಸೆ ನೀಡಲು ವಿಳಂಬ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ವೈದ್ಯಕೀಯ ಸಿಬ್ಬಂದಿ ಮಾತ್ರ ಚಪ್ಪಲಿ ಧರಿಸಿ ಓಡಾಡುತ್ತಾ, ರೋಗಿಗಳಿಗೆ ಮಾತ್ರ ನಿರ್ಬಂಧ ಹೇರುತ್ತಿದ್ದ ಈ ಕ್ರಮವು ತಾರತಮ್ಯದಿಂದ ಕೂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಆಸ್ಪತ್ರೆಯ ನೆಲದ ಮೇಲೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಹರಡುವಿಕೆ ಹೆಚ್ಚಿರುವುದರಿಂದ, ಬರಿಗಾಲಿನಲ್ಲಿ ನಡೆಯುವ ರೋಗಿಗಳಿಗೆ ಹೊಸ ಸೋಂಕುಗಳು ತಗುಲುವ ಅಪಾಯವಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಏಪ್ರಿಲ್ 2ರಂದು ಶಿವಪುರ ಮತ್ತು ಬಾಗೇಪಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸತ್ಯಾಸತ್ಯತೆಯನ್ನು ಅರಿತ ಅಧಿಕಾರಿಗಳು ತಕ್ಷಣವೇ ನಿಯಮದಲ್ಲಿ ಬದಲಾವಣೆ ತಂದಿದ್ದಾರೆ. ಹೊಸ ಆದೇಶದ ಪ್ರಕಾರ, ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ ಹಾಗೂ ಐಸಿಯು ಅಂತಹ ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ, ಆಸ್ಪತ್ರೆಯ ಉಳಿದ ಎಲ್ಲಾ ಆವರಣಗಳಲ್ಲಿ ಸಾರ್ವಜನಿಕರು ಮತ್ತು ರೋಗಿಗಳು ಪಾದರಕ್ಷೆಗಳನ್ನು ಧರಿಸಲು ಅವಕಾಶ ಕಲ್ಪಿಸಲಾಗಿದೆ.ಜಿಲ್ಲೆಯಾದ್ಯಂತ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೂಚನೆ ನೀಡಿದ್ದು, ಯಾವುದೇ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪಾದರಕ್ಷೆಯ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಬಾರದು ಎಂದು ಎಚ್ಚರಿಸಿದ್ದಾರೆ. ಜಿಲ್ಲಾಡಳಿತದ ಈ ತ್ವರಿತ ಕ್ರಮದಿಂದಾಗಿ ಶಿವಪುರ ಭಾಗದ ಬಡ ರೋಗಿಗಳು ನಿಟ್ಟುಸಿರು ಬಿಡುವಂತಾಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.ವರದಿಯ ಮುಖ್ಯಾಂಶಗಳು:
* ಶಿವಪುರ ಪಿಎಚ್‌ಸಿಯಲ್ಲಿ ರೋಗಿಗಳಿಗೆ ಚಪ್ಪಲಿ ಧರಿಸಲು ಇದ್ದ ನಿರ್ಬಂಧ ತೆರವು.
* ಒಟಿ, ಐಸಿಯು ಹೊರತುಪಡಿಸಿ ಉಳಿದೆಡೆ ಪಾದರಕ್ಷೆಗೆ ಮುಕ್ತ ಅವಕಾಶ.
* ನಿಯಮ ಉಲ್ಲಂಘಿಸುವ ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.