ಕನ್ನಡಪ್ರಭ ವಾರ್ತೆ ಮಂಗಳೂರು
ಮಹಾಶಿವರಾತ್ರಿ ಪ್ರಯುಕ್ತ ಕರಾವಳಿಯ ಶಿವನ ದೇವಸ್ಥಾನಗಳಲ್ಲಿ ಶ್ರದ್ಧಾ, ಭಕ್ತಿ, ಸಡಗರ ಸಂಭ್ರಮದ ಶಿವರಾತ್ರಿ ಆಚರಣೆ ಶುಕ್ರವಾರ ನಡೆಯಿತು.ದ.ಕ. ಜಿಲ್ಲೆಯಲ್ಲಿ ಪ್ರಮುಖವಾಗಿ ಶಿವ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಪೂಜಾ ವಿಧಿಗಳು ಆರಂಭಗೊಂಡಿತ್ತು. ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗಿನಿಂದಲೇ ಶಿವನಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅರ್ಚನೆಗಳು ನಡೆಯುತ್ತಿದೆ. ಶಿವರಾತ್ರಿಯ ವಿಶೇಷ ಪೂಜೆಗಳು ನಡೆದು ಧಾರ್ಮಿಕ ಕಾರ್ಯಕ್ರಮ, ಭಜನೆ, ಜಾಗರಣೆ ನಡೆಯುತ್ತಿದೆ. ಭಕ್ತರು ವಿಶೇಷವಾಗಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸಿ ಪುನೀತರಾದರು.
ಕದ್ರಿಯಲ್ಲಿ ಅಭಿಷೇಕ:ವಿಶೇಷವಾಗಿ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಗುಹಾ ತೀರ್ಥ ಮೂಲಕ ಶಿವನ ಲಿಂಗಕ್ಕೆ ಭಕ್ತರು ಅಭಿಷೇಕ ನೆರವೇರಿಸಿದರು. ಧರ್ಮಸ್ಥಳ ಮಂಜುನಾಥನ ಸನ್ನಿಧಿ, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ, ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ, ನರಹರಿ ಪರ್ವತ ಕ್ಷೇತ್ರ, ಬಂಟ್ವಾಳ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸೇರಿದಂತೆ ದ.ಕ.ಜಿಲ್ಲೆಯ ಎಲ್ಲ ಶಿವ ದೇವಸ್ಥಾನಗಳಲ್ಲಿ ಶಿವರಾತ್ರಿ ಆಚರಣೆ ಸಡಗರದಿಂದ ನೆರವೇರಿತು. ಇಡೀ ರಾತ್ರಿ ಜಾಗರಣೆ, ಭಜನೆ ನಡೆಯಿತು.
ಧರ್ಮಸ್ಥಳದಲ್ಲಿ:ಶಿವರಾತ್ರಿ ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ರಾತ್ರಿಯಿಂದ ಮುಂಜಾನೆಯವರೆಗೆ ಭಕ್ತರಿಂದ ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಲಿದೆ. ದೇವರ ದರ್ಶನಕ್ಕಾಗಿ ವಿವಿಧೆಡೆಗಳಲ್ಲಿ ಕಾಲ್ನಡಿಗೆಯಲ್ಲೇ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ಶಿವಭಕ್ತರು ಶಿವರಾತ್ರಿಯಂದು ಉಪವಾಸವಿದ್ದು ತಮ್ಮ ಮನೆಗಳಲ್ಲಿಯೂ ಆಚರಣೆ, ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಕುದ್ರೋಳಿಯಲ್ಲಿ:ಕುದ್ರೋಳಿಯಲ್ಲಿ ಮಹಾಶಿವರಾತ್ರಿ ಮತ್ತು ವರ್ಷಾವಧಿ ಜಾತ್ರೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ, ಮಹಾಪೂಜೆ ನೆರವೇರಿತು.
ರಾತ್ರಿ ರಥೋತ್ಸವ ಬಳಿಕ ವಿಷ್ಣು ಬಲಿ, ಮಧ್ಯರಾತ್ರಿ ಶಿವ ಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ ನಡೆಯಲಿದೆ. ಮಾ.9ರಂದು ಮಧ್ಯಾಹ್ನ ಪಂಚಾಮೃತ ಅಭಿಷೇಕ, ಮಹಾಪೂಜೆ, ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.