ಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ

KannadaprabhaNewsNetwork |  
Published : Mar 04, 2024, 01:17 AM IST
3ಎಚ್ಎಸ್ಎನ್12 : ಮಹಾ ಶಿವನ ಚಿತ್ರ. | Kannada Prabha

ಸಾರಾಂಶ

ಶಿವನು ರಾತ್ರಿಯ ಒಂದು ಪ್ರಹರ ವಿಶ್ರಾಂತಿಯನ್ನು ಪಡೆಯುವಾಗ, ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾ ಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂದು ಸನಾತನ ಸಂಸ್ಥೆ ತಿಳಿಸಿದೆ.

ಮಾಘ ಕೃಷ್ಣ ಚತುರ್ದಶಿಯಂದು ಶಿವ ವಿರಾಮ: ಸನಾತನ ಸಂಸ್ಥೆ ಮಾಹಿತಿ

ಕನ್ನಡಪ್ರಭ ವಾರ್ತೆ ಹಾಸನ

ಮಹಾ ಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ. ಮಾಘ ಕೃಷ್ಣ ಚತುರ್ದಶಿಯಂದು ದೇವ ಲೋಕದಲ್ಲಿ (ಅಲ್ಲಿಯ ಕಾಲಗಣನೆಗನುಸಾರ ಪ್ರತಿ ದಿನ) ಶಿವನು ರಾತ್ರಿಯ ಒಂದು ಪ್ರಹರ ವಿಶ್ರಾಂತಿಯನ್ನು ಪಡೆಯುವಾಗ, ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾ ಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂದು ಸನಾತನ ಸಂಸ್ಥೆ ತಿಳಿಸಿದೆ.

ಇದೇ ಮಾ.೮ ರಂದು ಮಹಾ ಶಿವರಾತ್ರಿ ನಿಮಿತ್ತ ಸನಾತನ ಸಂಸ್ಥೆಯು ಶಿವರಾತ್ರಿ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳನ್ನು ನೀಡಿದೆ.

ಮಹಾ ಶಿವರಾತ್ರಿ - ಮಹತ್ವ ಏನು?:

ಮಹಾ ಶಿವರಾತ್ರಿಯ ಕಾಲದಲ್ಲಿ ಶಿವತತ್ವದ ಕಾರ್ಯ ನಿಂತು ಹೋಗುತ್ತದೆ. ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಶಿವ ಪೂಜೆ-ಉಪಾಸನೆ ಮಾಡಿದಲ್ಲಿ, ಆ ಉಪಾಸನೆಯಲ್ಲಿ ಏನಾದರೂ ಕುಂದು ಕೊರತೆಯಿದ್ದರೂ, ಫಲ ಮಾತ್ರ ಶೇ. ೧೦೦ ದೊರೆಯುತ್ತದೆ. ಮಹಾ ಶಿವರಾತ್ರಿಯ ದಿನ ಶಿವ ತತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರ್ವಹಿಸುತ್ತದೆ. ಈ ದಿನ ಮಾಡುವ ಉಪಾಸನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಶಿವ ತತ್ವದ ಲಾಭವೂ ಆಗುತ್ತದೆ ಎಂದು ಸಂಸ್ಥೆ ಹೇಳುತ್ತದೆ.

ಈ ಕಾಲಾವಧಿಯಲ್ಲಿ ವಿಶ್ವದ ತಮೋಗುಣವನ್ನು ಶಿವತತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದು ಎಂದು ಮಹಾ ಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ವವನ್ನು ಆಕರ್ಷಿಸಬೇಕು. ಮಹಾ ಶಿವರಾತ್ರಿ ವ್ರತವನ್ನು ಹೇಗೆ ಮಾಡಬೇಕು? ಮಹಾ ಶಿವರಾತ್ರಿ ವ್ರತಕ್ಕೆ ‘ಉಪವಾಸ, ಪೂಜೆ ಮತ್ತು ಜಾಗರಣೆ’ ಹೀಗೆ ಮೂರು ವಿಭಾಗಗಳಿವೆ. ಮಾಫ ಕೃಷ್ಣ ತ್ರಯೋದಶಿಯಂದು ಒಪ್ಪೊತ್ತಿನ ಊಟ ಮಾಡಬೇಕು. ಚತುರ್ದಶಿಯಂದು ಬೆಳಿಗ್ಗೆ ಮಹಾ ಶಿವರಾತ್ರಿ ವ್ರತದ ಸಂಕಲ್ಪವನ್ನು ಮಾಡಬೇಕು.

ಇವನ್ನು ತಪ್ಪದೇ ಮಾಡಿ

ದಿನವಿಡೀ ಶಿವನ ನಾಮಜಪ ಮಾಡಬೇಕು, ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ, ಶಿವನಿಗೆ ಬಿಳಿ ಅಕ್ಷತೆ, ಬಿಳಿ ಹೂವು, ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡಿ, ಶಿವನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಬೇಕು.

‘ಓಂ ನಮಃ ಶಿವಾಯ’ ನಾಮವನ್ನು ಆದಷ್ಟು ಹೆಚ್ಚು ಜಪಿಸಿ. ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು.

ಯಾಮಪೂಜೆ

ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ’ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗ ಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ, ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆ ಬೇರೆಯಾಗಿರುತ್ತವೆ. ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು ಎಂದು ಸನಾತನ ಸಂಸ್ಥೆಯು ಮಾಹಿತಿ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!