ದತ್ತಿ ಉಪನ್ಯಾಸ । ಅರಕಲವಾಡಿ ಸರ್ಕಾರಿ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ತಿಂದ ಕಾರ್ಯಕ್ರಮ
ಸುತ್ತೂರು ಶ್ರೀಮಠದ ಪೀಠಾಧಿಪತಿಯಾಗಿದ್ದ ಶಿವರಾತ್ರಿ ರಾಜೇಂದ್ರ ಶ್ರೀಗಳು ನಾಡಿನಾದ್ಯಂತ ನೂರಾರು ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ವಿನಯ್ ತಿಳಿಸಿದರು.
ತಾಲೂಕಿನ ಅರಕಲವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಸಂಸ್ಥಾಪಕರ ದಿನಾಚರಣೆ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿ, ರಾಜೇಂದ್ರ ಶ್ರೀಗಳು ಶಿಕ್ಷಣದ ಮಹತ್ವವನ್ನು ಅರಿತಿದ್ದರು. ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಜಾತಿ-ಧರ್ಮಗಳ ಭೇದವಿಲ್ಲದೆ ಸಹಾಯ ಮಾಡಿದರು ಎಂದು ಹೇಳಿದರು.ಉತ್ತಮ ಆರೋಗ್ಯ ಸೇವೆ ನೀಡಲು ಆಸ್ಪತ್ರಗಳ ನಿರ್ಮಾಣ, ಶರಣ ಸಾಹಿತ್ಯದ ಪ್ರಚಾರ-ಪ್ರಸಾರಕ್ಕಾಗಿ ಶರಣ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಕಟಣೆಗಾಗಿ ಗ್ರಂಥಮಾಲೆ, ಸಹಕಾರ ಸಂಘಗಳು, ಸಂಗೀತ ಸಭಾ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಎಲ್ಲ ವರ್ಗಗಳ ಏಳ್ಗೆಗೆ ಶ್ರಮಿಸಿದರು. ಬಡತನದ ಕಾಲದಲ್ಲಿ ತಮ್ಮ ಚಿನ್ನದ ಕರಡಿಗೆ, ರುದ್ರಾಕ್ಷಿಯ ಚಿನ್ನದ ಕವಚಗಳನ್ನು ಮಾರಾಟ ಮಾಡಿ, ಪಡಿತರ ಒದಗಿಸಿದರು. ವಿದ್ಯಾರ್ಥಿಗಳಿಗೆ ನಡು ರಾತ್ರಿಯಲ್ಲೂ ಆಹಾರ ಒದಗಿಸಿದ ಮಾತೃ ಹೃದಯಿಗಳು ಶ್ರೀ ರಾಜೇಂದ್ರ ಶ್ರಿಗಳು ಎಂದು ಶ್ರೀಗಳ ಸೇವೆ ಸ್ಮರಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಚನಕಾರರ ಪರಿಚಯ ಮಾಡಿಕೊಟ್ಟರು. ದತ್ತಿ ದಾಸೋಹಿಗಳಾದ ಕಿಲಗೆರೆ ರತ್ನಮ್ಮ ಮತ್ತು ಬಸವರಾಜು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಾಗರಾಜು ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಎ.ಎಂ.ನಾಗಮಲ್ಲಪ್ಪ, ಶಸಾಪದ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ಶಸಾಪ ತಾಲೂಕು ಅಧ್ಯಕ್ಷ ಆರ್.ಎಸ್.ಲಿಂಗರಾಜು, ನಗರ ಘಟಕದ ಅಧ್ಯಕ್ಷ ಎಂ. ಸುಂದರ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.