ಗದಗ: ಕನ್ನಡ ನಾಡು ನುಡಿಗೆ ಲಿಂಗಾಯತ ಧರ್ಮದ ಕೊಡುಗೆ ಅಪಾರ. ಕನ್ನಡ ಭಾಷೆ ದುಂಡು ದುಂಡಾದ ಭಾಷೆ. ವಚನಕಾರರು ಕನ್ನಡ ಭಾಷೆಯಲ್ಲಿಯೇ ವಚನ ರಚಿಸಿದ್ದಾರೆ. ಲಿಂಗಾಯತ ಧರ್ಮ ಮತ್ತು ಕನ್ನಡದ ಬೆಳವಣಿಗೆಗೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾದುದು ಎಂದು ಜ.ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಮೊದಲಿದ್ದ ಮುಂಬೈ ಕರ್ನಾಟಕ ಈಗ ಕಿತ್ತೂರು ಕರ್ನಾಟಕವಾಗಿದೆ. ಏಕೀಕರಣದ ಹೊರಾಟದಿಂದ ಕನ್ನಡ ಭಾಷೆ ಆಡುವ ಪ್ರದೇಶವನ್ನು ಕರ್ನಾಟಕವೆಂದು ನಾಮಕರಣ ಮಾಡಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದರು. ಮರಾಠಿಮಯವಾಗಿದ್ದ ಕನ್ನಡ ಪ್ರದೇಶದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಕನ್ನಡ ಶಾಲೆ ತೆರೆದು ಕನ್ನಡ ಭಾಷೆ ಉಳಿಸಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು, ಗಡಿನಾಡು ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕನ್ನಡ ಕಟ್ಟುವ ಕೆಲಸವಾಗಬೇಕು. ಕನ್ನಡಕ್ಕಾಗಿ ಹೋರಾಡಿದ ದಿಗ್ಗಜರನ್ನು ಸ್ಮರಿಸಿಕೊಳ್ಳಬೇಕು ಎಂದರು.
ಈ ವೇಳೆ ಅಂತೂರು-ಬೆಂತೂರಿನ ಶ್ರೀರಾಚೋಟೇಶ್ವರ ಸ್ವಾಮಿಗಳು ಅಂತೂರ ಬೆಂತೂರ ವಿಶೇಷ ಕನ್ನಡ ತಿಂಗಳಿನ ಕಾರ್ಯಕ್ರಮವನ್ನು ವಿನೂತನವಾಗಿ ತಂತ್ರಾಂಶ ಬಳಸಿಕೊಂಡು ರಿಮೋಟ್ ಡಿವೈಸ್ ಉಪಯೋಗಿಸಿ ಉದ್ಘಾಟಿಸಿದರು.ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿದ್ಧಲಿಂಗೇಶ್ವರ ಹಲಸೂರು ಅವರು, ತೋಂಟದಾರ್ಯ ಮಠದಲ್ಲಿ ನಡೆದ ನವೆಂಬರ್ ತಿಂಗಳ ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ ಕನ್ನಡದ ದಿಗ್ಗಜರು ವಿಷಯ ಕುರಿತು ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಸಾಹಿತಿ, ಕವಿ, ಸಾಹಿತ್ಯ ಕುರಿತು ಮಾತನಾಡಿದರು.
ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೆರವೇರಿಸಿದರು. ಧರ್ಮಗ್ರಂಥ ಪಠಣವನ್ನು ಸೌಜನ್ಯ ಎಸ್. ಹಳ್ಳಿಕೇರಿ, ವಚನ ಚಿಂತನವನ್ನು ಛಾಯಾ ಜಿ.ಜಂಗಮನಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶರಣ ಕರಿಯಪ್ಪ ಸಿದ್ದಲಿಂಗಪ್ಪ ಜಂಗಳಿ ಕನಕಶ್ರೀ ಮೆಡಿಕಲ್ ಸ್ಟೋರ್ ಗದಗ ವಹಿಸಿಕೊಂಡಿದ್ದರು.
ಶಿವಾನುಭವ ಸಮಿತಿಯ ಚೆರಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರು. ಉಪಾಧ್ಯಕ್ಷ ಡಾ. ಉಮೇಶ ಪುರದ ನಿರೂಪಿಸಿದರು.