ಕಂಪ್ಲಿ: ಪೇಟೆ ಬಸವೇಶ್ವರ ನೀಲಮ್ಮ ರಥೋತ್ಸವದ ಅಂಗವಾಗಿ ಕಂಪ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತಿಯ ಸಂಭ್ರಮ ನೆರೆದಿದ್ದು, ಅದರ ಭಾಗವಾಗಿ ದಿನವಹಿ ಮಾರುಕಟ್ಟೆ ಮುಂಭಾಗದಲ್ಲಿ ಭಾನುವಾರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲ್ಪಟ್ಟವು.
ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಶಿವಶರಣರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಸಮಗಾರ ಹರಳಯ್ಯರು ಬದುಕಿನಲ್ಲಿ ಅನುಸರಿಸಿದ ಸಮಾನತೆ, ಮಾನವತೆ ಹಾಗೂ ಶ್ರಮದ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ನಾಟಕಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶ್ಲಾಘಿಸಿದರು.
ನಾಟ್ಯಕಲಾ ಸಂಘದ ಕಲಾವಿದರು ವಿಭಿನ್ನ ಪಾತ್ರಧಾರಿಗಳ ಮೂಲಕ ಹರಳಯ್ಯರ ಜೀವನ, ಸಮಾಜ ಸುಧಾರಣೆಗೆ ನೀಡಿದ ಕೊಡುಗೆ, ಹಾಗೂ ಶರಣ ಸಂಪ್ರದಾಯದ ಆದರ್ಶಗಳನ್ನು ಪರಿಣಾಮಕಾರಿಯಾಗಿ ವೇದಿಕೆಯ ಮೇಲೆ ಮೂಡಿಸಿದರು.ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ ಹಿರೇಮಠ, ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ. ದಾನಪ್ಪ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಎ. ಚನ್ನಪ್ಪ, ಮುಖಂಡರಾದ ಸಿದ್ದಿ ಅಂಜಿನಪ್ಪ, ಅಶೋಕ್ ಕುಕನೂರು, ಡಿ.ರಂಗಯ್ಯ ಇದ್ದರು.
ಪಾಮಯ್ಯ ಶರಣರ ನಾಟಕ ನಿರ್ದೇಶನದಲ್ಲಿ, ಮೆಟ್ರಿ ಮೌನೇಶ್ ತಬಲವಾದಕರಾಗಿ, ರಾಮು ಕ್ಯಾಶಿಯೋ ವಾದಕರಾಗಿ, ರಾಮಸಾಗರದ ವಸಂತರಾಜ ಕಹಳೆ ಹಿನ್ನಲೆ ಗಾಯಕರಾಗಿ, ಕೆ.ಎಂ.ಬಸವ ರಕ್ಷಿತ ವಚನ ಗಾಯಕರಾಗಿ, ಪಿ.ಗಂಗಾಂಬಿಕೆ ನೃತ್ಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. ಶ್ರೀಗುರು ಬಸವ ಬಳಗ ವಚನ ನೃತ್ಯ ತಂಡದ ಕಲಾವಿದರು ವಚನಗಳಿಗೆ ನೃತ್ಯ ಮಾಡಿದರು.