ನನ್ನ ಮಕ್ಕಳನ್ನು ಗುಂಡಿಟ್ಟು ಕೊಲ್ಲಿ!

KannadaprabhaNewsNetwork | Published : Aug 22, 2024 12:49 AM

ಸಾರಾಂಶ

ಕಳೆದ ಭಾನುವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ ಘಟನೆಗೆ ಸಂಬಂಧಿಸಿ ಗೌಸುಸಾಬ ಅವರ ಪುತ್ರ ಅಫ್ತಾಬ್ ನನ್ನು ಬಂಧಿಸಲು ತೆರಳಿದ ವೇಳೆ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆತನಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಹುಬ್ಬಳ್ಳಿ:

ನಾನು ದುಡಿದು ಕಷ್ಟಪಟ್ಟು ಬೆಳಸಿದ ಮಕ್ಕಳೇ ಇಂದು ನನ್ನ ಮಾತು ಕೇಳದೇ ಮನೆತನದ ಮಾನ, ಮರ‍್ಯಾದೆ ಹಾಳು ಮಾಡಿದ್ದಾರೆ. ನೀವೇ ಅವರನ್ನು ಗುಂಡಿಟ್ಟು ಕೊಲ್ಲಿ. ಬೇಕಾದರೆ ನಾನು ಪತ್ರದಲ್ಲಿ ಬರೆದು ಕೊಡುವೆ!

ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಫ್ತಾಬ್‌ ಕರಡಿಗುಡ್ಡನ ತಂದೆ ಗೌಸುಸಾಬ ಕರಡಿಗುಡ್ಡ ಹೇಳುವ ಮಾತಿದು.

ಹಳೇ ಹುಬ್ಬಳ್ಳಿಯ ಸದರಸೋಪಾ ಬ್ಯಾಹಟ್ಟಿ ಪ್ಲಾಟ್ ನಿವಾಸಿ ಗೌಸುಸಾಬ ಕರಡಿಗುಡ್ಡ, ಪೊಲೀಸ್‌ ಆಯುಕ್ತರ ಎದುರಿಗೆ ಮಗನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರು ಹಾಕುತ್ತಲೇ ನೀಡಿರುವ ಹೇಳಿಕೆ ಇದೀಗ ವೈರಲ್‌ ಆಗಿದೆ.

ಕಳೆದ ಭಾನುವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ ಘಟನೆಗೆ ಸಂಬಂಧಿಸಿ ಗೌಸುಸಾಬ ಅವರ ಪುತ್ರ ಅಫ್ತಾಬ್ ನನ್ನು ಬಂಧಿಸಲು ತೆರಳಿದ ವೇಳೆ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆತನಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಈ ಘಟನೆಗೆ ಸಂಬಂಧಿಸಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬುಧವಾರ ಘಟನಾ ಸ್ಥಳ ಪರಿಶೀಲನೆಗೆ ಹೋದ ವೇಳೆ ಅಫ್ತಾಬ್‌ ತಂದೆಯನ್ನು ಭೇಟಿ ಮಾಡಿದಾಗ ಮಕ್ಕಳು ಮಾಡಿದ ಕೃತ್ಯದಿಂದ ಮನನೊಂದು ಆಯುಕ್ತರ ಎದುರು ಕಣ್ಣೀರು ಹಾಕಿದರು.

ಗೌಸುಸಾಬ ಕರಡಿಗುಡ್ಡ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಆದರೆ, ಇಬ್ಬರೂ ಮಕ್ಕಳು ಹಾದಿತಪ್ಪಿದ್ದರಿಂದ ಗೌಸುಸಾಬ ತೀವ್ರ ನೊಂದಿದ್ದಾರೆ.‌ ಅವರೂ ನನ್ನಂತೆ ಕೂಲಿ ಮಾಡುವುದು ಬೇಡ ಎಂದು ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಿದೆ. ಆದರೆ ವಿದ್ಯೆ ಅವರ ಕೈ ಹಿಡಿಯಲಿಲ್ಲ. ನಂತರ ಹೊಟೇಲ್‌ ಹಾಕಿಕೊಟ್ಟೆ. ಆದರೂ ಸುಧಾರಣೆ ಕಾಣಲಿಲ್ಲ. ಮನೆಯವರ ಮಾತು ಕೇಳದೆ ಈಗ ರೌಡಿಗಳಾಗಿ ನಮ್ಮ ಮನೆತನದ‌ ಗೌರವವನ್ನೇ ಹಾಳು ಮಾಡಿದ್ದಾರೆ. ಇಂಥವರು ಭೂಮಿಯ ಮೇಲೆ ಇದ್ದರೆಷ್ಟು, ಬಿಟ್ಟರೆಷ್ಟು. ಕೊಂದು ಬಿಡಿ ಎಂದೆನ್ನುತ್ತಾರೆ.

ಗೌಸುಸಾಬ್‌ನಿಗೆ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ನಿಮ್ಮ ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲ. ನಿಮ್ಮ ಸಮಾಜದ ಹಿರಿಯರನ್ನು ಸೇರಿಸಿ ಬುದ್ಧಿವಾದ ಹೇಳಿ. ಆಗಲೂ ಮಾತು ಕೇಳದೇ ಇದ್ದರೆ ನಾವು ಅವನಿಗೆ ಬುದ್ಧಿ ಕಲಿಸುತ್ತೇವೆ. ನೀವು ಧೈರ್ಯವಾಗಿರಿ ಎಂದು ಸಮಾಧಾನ ಪಡಿಸಿದರು.

Share this article