ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಧರಣಿ
ಕನ್ನಡಪ್ರಭ ವಾರ್ತೆ ಚಾಮರಾಜನಗರವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಸಚಿವ ಜಮೀರ್ ಅಹಮದ್ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಸಮಾವೇಶಗೊಂಡ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಐವಾನ್ ಡಿಸೋಜ, ಜಮೀರ್ ಅಹಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭಿತ್ತಿ ಪತ್ರ ಕಿತ್ತುಕೊಂಡ ಪೊಲೀಸರು: ಪ್ರತಿಭಟನಾನಿರತರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾವಚಿತ್ರವಿರುವ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ಭಿತ್ತಿಪತ್ರಗಳನ್ನು ಕಿತ್ತುಕೊಳ್ಳಲು ಮುಂದಾದರು. ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ಉಂಟಾಯಿತು. ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪಟ್ಟಣ ಠಾಣೆ ಪೊಲೀಸರ ವಿರುದ್ಧವೇ ಘೋಷಣೆ ಕೂಗಿ, ಭುವನೇಶ್ವರಿ ವೃತ್ತದಲ್ಲಿ ಧರಣಿ ಕುಳಿದರು.
ರಾಜ್ಯಪಾಲರಿಗೆ ಅಪಮಾನವಾದಾಗ ಎಲ್ಲಿ ಹೋಗಿದ್ರೂ ಪೊಲೀಸರು: ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲ, ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳಿಗೆ ಚಪ್ಪಲಿಯಲ್ಲಿ ಹೊಡೆದು, ಅಪಮಾನ ಮಾಡಿದಾಗ ಎಲ್ಲಿ ಹೋಗಿದ್ದರು ಈ ಪೊಲೀಸರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೂವರು ಶಾಸಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯನ್ನು ಹೊಡೆಯಲಾಗಿದೆ. ನಮ್ಮ ನಾಯಕರ ಭಾವಚಿತ್ರಗಳಿಗೆ ಅಪಮಾನ ಮಾಡಲಾಗಿದೆ. ಆಗ ತಡೆಯದ ಪೋಲಿಸರು ನಮ್ಮ ಬಳಿಗೆ ಬಂದು ಭಿತ್ತಿ ಪತ್ರಗಳನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಪೊಲೀಸರು ಕಾಂಗ್ರೆಸ್ ಪಕ್ಷದ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಡಿಸೋಜ ಮನೆಗೆ ನುಗ್ಗುತ್ತೇವೆ: ರಾಜ್ಯಪಾಲರ ಮನೆಗೆ ನುಗ್ಗುತ್ತವೆ. ಬಾಂಗ್ಲಾ ದೇಶದ ಮಾದರಿಯಲ್ಲಿ ಪ್ರಧಾನಿ ಮನೆಗೆ ನುಗ್ಗಬೇಕಾಗುತ್ತದೆ ಎಂಬ ಹೇಳಿಕೆ ನೀಡುತ್ತಿರುವ ಡಿಸೋಜ ಹಾಗೂ ಜಮೀರ್‌ಖಾನ್ ಅನ್ನು ಕೂಡಲೇ ಬಂಧಿಸಬೇಕು. ರಾಜ್ಯಭವನಕ್ಕೆ ನುಗ್ಗುವುದಲ್ಲ ಡಿಸೋಜ ಅವರೇ ನಿಮಗೆ ತಾಕತ್ತು ಇದ್ದರೆ, ಬಾಂಗ್ಲದೇಶವನ್ನು ಬೆಂಬಲಿಸುವಂತಹ ಹೇಳಿಕೆ ನೀಡುತ್ತಿದ್ದಿರಿ. ಈ ಹೇಳಿಕೆಯನ್ನು ಖಂಡಿಸಿ, ಹಿಂದುಗಳಿಗೆ ಅಪಮಾನ ಮಾಡಿರುವ ನೀವು ನಮ್ಮ ದೇಶವನ್ನು ಬಿಟ್ಟು ತೊಲಗಿ, ರಾಜ್ಯಪಾಲರಿಗೆ ಯಾವುದೇ ರೀತಿ ತೊಂದರೆಯಾದರೂ ಸಹ ಇದಕ್ಕೆ ಡಿಸೋಜ ಕಾರಣ. ಬಿಜೆಪಿ ಯುವ ಮೋರ್ಚಾದಿಂದ ಡಿಸೋಜ ಮನೆಗೆ ನುಗ್ಗುವ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಗೂ ಮುನ್ನ ಇಂದು ನಿಧನರಾದ ಬಿಜೆಪಿ ಹನೂರು ಮಂಡಲದ ಮಾಜಿ ಅಧ್ಯಕ್ಷ ವೆಂಕಟೇಶ್ ಅವರ ಅತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು. ಪ್ರತಿಭಟನೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್ ಪಟೇಲ್, ವಿರಾಟ್ ಶಿವು, ಬುಲೆಟ್ ಚಂದ್ರು, ಕೊಟ್ಟಂಬಳ್ಳಿ ಕುಮಾರ್, ಗುರುಪ್ರಸಾದ್, ಬಂಗಾರನಾಯಕ, ಮಂಜುನಾಥ್, ಪ್ರವೀಣ್, ವಿರೇಂದ್ರ, ಮರಿಯಾಲ ಮಹೇಶ್, ಯುವ ಗಿರೀಶ್, ಉತ್ತುವಳ್ಳಿ ಮಹೇಶ್, ಪ್ರವೀನ್, ಪ್ರಥ್ವಿ, ಪರಶಿವ, ಮುತ್ತಿಗೆಮೂರ್ತಿ, ಮಣಿಕಂಠ, ರಾಮಚಂದ್ರು ಇದ್ದರು.20ಸಿಎಚ್ಎನ್22ಚಾಮರಾಜನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಸಚಿವ ಜಮೀರ್ ಖಾನ್ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.