ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ದರೋಡೆ ಆರೋಪಿಗೆ ಶೂಟೌಟ್‌

KannadaprabhaNewsNetwork | Published : Jan 22, 2025 12:32 AM

ಸಾರಾಂಶ

ದರೋಡೆ ಪ್ರಕರಣದಲ್ಲಿ ಮುರುಗಂಡಿ ದೇವರ್‌, ಯಶೋವಾ ರಾಜೇಂದ್ರನ್‌ ಮತ್ತು ಕಣ್ಣನ್‌ ಮಣಿ ಈ ಮೂವರನ್ನು ಬಂಧಿಸಲಾಗಿತ್ತು. ಸದ್ಯಕ್ಕೆ ಮಣಿಯನ್ನು ಮಾತ್ರ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ಆರೋಪಿಗಳನ್ನು ತಮಿಳುನಾಡು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರಿಗೆ ಕರೆತರಲಾಗಿದೆ. ದರೋಡೆ ಪ್ರಕರಣದಲ್ಲಿ ಮುರುಗಂಡಿ ದೇವರ್‌, ಯಶೋವಾ ರಾಜೇಂದ್ರನ್‌ ಮತ್ತು ಕಣ್ಣನ್‌ ಮಣಿ ಈ ಮೂವರನ್ನು ಬಂಧಿಸಲಾಗಿತ್ತು. ಸದ್ಯಕ್ಕೆ ಮಣಿಯನ್ನು ಮಾತ್ರ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ಆರೋಪಿಗಳನ್ನು ತಮಿಳುನಾಡು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರಿಗೆ ಕರೆತರಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ನಿವಾಸಿ ಕಣ್ಣನ್‌ ಮಣಿ (36) ಎಂಬಾತನ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ಶೂಟೌಟ್‌ ನಡೆಸಿದ್ದಾರೆ. ಈ ಘಟನೆಯಲ್ಲಿ ಆರೋಪಿ ಕಣ್ಣನ್‌ ಮಣಿಯ ಕಾಲಿಗೆ ಗುಂಡೇಟು ತಗಲಿದೆ. ಅಲ್ಲದೆ ಮೂರು ಮಂದಿ ಪೊಲೀಸ್‌ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ಕರ್ನಾಟಕ - ಕೇರಳ ಗಡಿಯ ತಲಪಾಡಿ ಗ್ರಾಮದ ಅಲಂಕಾರು ಗುಡ್ಡೆ ಬಳಿ ಸಂಜೆ 4.20 ಸುಮಾರಿಗೆ ಈ ಘಟನೆ ನಡೆದಿದೆ. ಉಳ್ಳಾಲ ಠಾಣೆ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರು ತನಿಖಾ ತಂಡದ ಜೊತೆ ಆರೋಪಿಯನ್ನು ಕರೆದುಕೊಂಡು ಸ್ಥಳ ಮಹಜರು ನಡೆಸುತ್ತಿದ್ದರು. ಈ ಸಂದರ್ಭ ಆರೋಪಿ ಕಣ್ಣನ್‌ ಮಣಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ವೇಳೆ ಆರೋಪಿ ಸ್ಥಳದಲ್ಲಿ ಬಿದ್ದುಕೊಂಡಿದ್ದ ಬಿಯರ್‌ ಬಾಟಲಿ ಒಡೆದು ಪೊಲೀಸರಾದ ಆಂಜನಪ್ಪ ಮತ್ತು ನಿತಿನ್‌ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತನಿಖಾಧಿಕಾರಿ ಉಳ್ಳಾಲ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರಿಗೆ ಇರಿಯಲು ಯತ್ನಿಸಿದ್ದಾನೆ. ಈ ಸಂದರ್ಭ ಸಿಸಿಬಿ ಇನ್‌ಸ್ಪೆಕ್ಟರ್‌ ರಫೀಕ್‌ ಅವರು ಆತನಿಗೆ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಆರೋಪಿ ಇದಕ್ಕೆ ಮಣಿಯದೆ ಹಲ್ಲೆ ಮುಂದುವರಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಗಿದೆ.ಘಟನೆಯಲ್ಲಿ ಉಳ್ಳಾಲ ಇನ್‌ಸ್ಪೆಕ್ಟರ್‌ ಬಾಲಕೃಷ್ಣ, ಸಿಸಿಬಿ ಕಾನ್‌ಸ್ಟೇಬಲ್‌ ಆಂಜನಪ್ಪ, ಉಳ್ಳಾಲ ಠಾಣೆ ಕಾನ್‌ಸ್ಟೇಬಲ್‌ ನಿತಿನ್‌ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಣ್ಣನ್‌ ಮಣಿ ಮೂಲತಃ ತಮಿಳುನಾಡಿನವನಾದರೂ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾನೆ. ಈತ ಧಾರಾವಿ ಗ್ಯಾಂಗ್‌ನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಾನೆ.

ದರೋಡೆ ಪ್ರಕರಣದಲ್ಲಿ ಮುರುಗಂಡಿ ದೇವರ್‌, ಯಶೋವಾ ರಾಜೇಂದ್ರನ್‌ ಮತ್ತು ಕಣ್ಣನ್‌ ಮಣಿ ಈ ಮೂವರನ್ನು ಬಂಧಿಸಲಾಗಿತ್ತು. ಸದ್ಯಕ್ಕೆ ಮಣಿಯನ್ನು ಮಾತ್ರ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ಆರೋಪಿಗಳನ್ನು ತಮಿಳುನಾಡು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರಿಗೆ ಕರೆತರಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article