ಕನಕಾಚಲಪತಿ ದೇವಸ್ಥಾನ ಮುಂಭಾಗದ ಅಂಗಡಿ ರಾತ್ರೋರಾತ್ರಿ ತೆರವು

KannadaprabhaNewsNetwork | Published : Apr 28, 2025 12:46 AM

ಸಾರಾಂಶ

ಹಲವು ದಶಕಗಳಿಂದ ಕನಕಾಚಲಪತಿ ದೇವಸ್ಥಾನ ಮುಂಭಾಗದಲ್ಲಿ ಕುಂಕುಮ, ವಿಭೂತಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕಳೆದ ವರ್ಷದಿಂದ ಪ್ರತಿ ಅಂಗಡಿಯಿಂದ ದೇವಸ್ಥಾನಕ್ಕೆ ತಿಂಗಳಿಗೆ ₹ ೮೦೦ ಬಾಡಿಗೆ ಕಟ್ಟುತ್ತಿದ್ದೇವೆ. ಆದರೆ, ತಿಂಗಳಿಗೆ ₹ ೨ ಸಾವಿರ ವ್ಯಾಪಾರ ಆಗುವುದಿಲ್ಲ.

ಕನಕಗಿರಿ:

ಕನಕಾಚಲಪತಿ ದೇವಸ್ಥಾನ ಮುಂಭಾಗದಲ್ಲಿ ವಿಭೂತಿ, ಕುಂಕುಮ ಮಾರಾಟ ಮಾಡಬಾರದೆಂದು ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂದು ಕುಂಕುಮ ಮಾರಾಟಗಾರರು ಆರೋಪಿಸಿದ್ದಾರೆ.

ಹಲವು ದಶಕಗಳಿಂದ ಕನಕಾಚಲಪತಿ ದೇವಸ್ಥಾನ ಮುಂಭಾಗದಲ್ಲಿ ಕುಂಕುಮ, ವಿಭೂತಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕಳೆದ ವರ್ಷದಿಂದ ಪ್ರತಿ ಅಂಗಡಿಯಿಂದ ದೇವಸ್ಥಾನಕ್ಕೆ ತಿಂಗಳಿಗೆ ₹ ೮೦೦ ಬಾಡಿಗೆ ಕಟ್ಟುತ್ತಿದ್ದೇವೆ. ಆದರೆ, ತಿಂಗಳಿಗೆ ₹ ೨ ಸಾವಿರ ವ್ಯಾಪಾರ ಆಗುವುದಿಲ್ಲ. ತಿಂಗಳ ಬಾಡಿಗೆ ಹೆಚ್ಚಿಗೆ ಕಟ್ಟದಿದ್ದರೇ ಅಂಗಡಿ ತೆರವುಗೊಳಿಸಲಾಗುವುದು, ಬೇರೆಡೆ ಇಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮ ಅಂಗಡಿಗಳನ್ನು ಹಳ್ಳಕ್ಕೆ ಹಾಕುತ್ತೇವೆ ಎಂದು ದೇವಸ್ಥಾನಕ್ಕೆ ಸಂಬಂಧಿಸದ ಕೆಲವರು ದೌರ್ಜನ್ಯವೆಸಗುತ್ತಿದ್ದಾರೆ. ಇನ್ನು ಕೆಲವರು ದೇವಸ್ಥಾನ ಸಮಿತಿ ಅಧ್ಯಕ್ಷರ, ಸದಸ್ಯರ ಸಂಬಂಧಿಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಧಮ್ಕಿ ಹಾಕುತ್ತಿದ್ದಾರೆ. ಹೀಗೆ ಕಳೆದೆರೆಡು ವರ್ಷದಿಂದ ದೌರ್ಜನ್ಯ, ದರ್ಪಕ್ಕೆ ಒಳಗಾಗಿರುವ ನಮಗೆ ನ್ಯಾಯ ಕೇಳಲು ಹೋದರೆ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ದೇವಸ್ಥಾನ ಸಮಿತಿ ಮಾಡುತ್ತಿದೆ ಎಂದು ವ್ಯಾಪಾರಸ್ಥರು ನೋವು ತೋಡಿಕೊಂಡರು.

ವಿಭೂತಿ, ಕುಂಕುಮ ಟೆಂಡರ್ ಪಡೆದು ಕೈ ಸುಟ್ಟುಕೊಂಡಿರುವ ನಮಗೆ ವ್ಯಾಪಾರ ಮಾಡಲು ಬಿಡದೇ ದೇವಸ್ಥಾನದ ತ್ರಿವೇಣಿ ಸಂಗಮದ ಸೇತುವೆ ಮೇಲೆ ಅಂಗಡಿ ಹಾಕಿಕೊಳ್ಳುವಂತೆ ಏ. ೨೬ರ ರಾತ್ರಿ ಸಮಿತಿಯವರು ತಾಕೀತು ಮಾಡಿದ್ದಾರೆ. ದಶಕಗಳಿಂದ ವ್ಯಾಪಾರ ಮಾಡುತ್ತಿರುವ ನಮಗೆ ಒಂದೆಡೆ ಜಾಗೆ ಕೊಡುತ್ತಿಲ್ಲ. ತಿಂಗಳಿಗೆ ಬಾಡಿಗೆ ಪ್ರಮಾಣ ನಿಗದಿಪಡಿಸದೆ ಹೆಚ್ಚಿನ ಹಣವನ್ನು ದೇವಸ್ಥಾನ ಸಮಿತಿಯವರು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಈ ಕುರಿತು ಪರಿಶೀಲಿಸಿ ನಮಗೆ ನ್ಯಾಯ ಕೊಡಿಸಬೇಕೆಂದು ಗುತ್ತಿಗೆದಾರ ಛತ್ರಪತಿ ಕುಂಕುಮಗಾರ ಮನವಿ ಮಾಡಿದರು.

ರಾತ್ರೋರಾತ್ರಿ ಅಂಗಡಿಗಳ ತೆರವು:

ದೇವಸ್ಥಾನ ಸಮಿತಿಯವರು ವಿಭೂತಿ, ಕುಂಕುಮದ ಅಂಗಡಿಗಳನ್ನು ಏ. ೨೬ರ ರಾತ್ರಿ ಏಕಾಏಕಿ ತೆರವುಗೊಳಿಸಿ ತ್ರಿವೇಣಿ ಸಂಗಮದ ಸೇತುವೆ ಮೇಲೆ ಇಟ್ಟಿದ್ದಾರೆ. ಈ ರೀತಿ ಹಲವು ತಿಂಗಳಿಂದ ನಡೆಯುತ್ತಿದ್ದು, ವ್ಯಾಪಾರಸ್ಥರ ಬದುಕು ದುಸ್ತರವಾಗಿದೆ. ಒಂದೆಡೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡದ ದೇವಸ್ಥಾನ ಸಮಿತಿ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಭೂತಿ, ಕುಂಕುಮ ವ್ಯಾಪಾಸ್ಥರಿಗೆ ದೌರ್ಜನ್ಯ ಮಾಡಿಲ್ಲ. ತಾವಾಗಿಯೇ ನಮ್ಮ ಬಳಿ ಬಂದು ತಿಂಗಳಿಗೆ ₹ ೮೦೦ ಬಾಡಿಗೆ ನೀಡುತ್ತಿದ್ದಾರೆ. ವ್ಯಾಪಾರಸ್ಥರ ವ್ಯಾಪಾರಕ್ಕೆ ಸಮಸ್ಯೆಯಾಗಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಜಾಗೆಯ ಕೊರತೆಯಿಂದಾಗಿ ಕೆಲ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ಸಿದ್ದಲಿಂಗಯ್ಯಸ್ವಾಮಿ, ದೇವಸ್ಥಾನ ಕಾರ್ಯದರ್ಶಿ

Share this article