ಮಳಿಗೆಗಳ ಟೆಂಡರ್‌: ಎರಡು ಗುಂಪುಗಳ ಘರ್ಷಣೆ

KannadaprabhaNewsNetwork |  
Published : Oct 04, 2026, 03:15 AM IST
ಘರ್ಷಣೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ನಗರದ ಕೇಂದ್ರ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಳಿಗೆಗಳ ಟೆಂಡರ್‌ಗೆ ಸಂಬಂಧಿಸಿದಂತೆ ಶನಿವಾರ ಲೈನ್‌ಔಟ್‌ ಹಾಕುವ ವೇಳೆ ಟೆಂಡರ್‌ ಪಡೆದಿದ್ದ ಕಿತ್ತೂರು ಕರ್ನಾಟಕ ಸೇನೆಯ ಪ್ರಮುಖರು ಹಾಗೂ ಸಮಗಾರ ಹರಳಯ್ಯ ಸಮಾಜದವರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸಿದರು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಎರಡು ಗುಂಪುಗಳ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಗರದ ಕೇಂದ್ರ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಳಿಗೆಗಳ ಟೆಂಡರ್‌ಗೆ ಸಂಬಂಧಿಸಿದಂತೆ ಶನಿವಾರ ಲೈನ್‌ಔಟ್‌ ಹಾಕುವ ವೇಳೆ ಟೆಂಡರ್‌ ಪಡೆದಿದ್ದ ಕಿತ್ತೂರು ಕರ್ನಾಟಕ ಸೇನೆಯ ಪ್ರಮುಖರು ಹಾಗೂ ಸಮಗಾರ ಹರಳಯ್ಯ ಸಮಾಜದವರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸಿದರು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಎರಡು ಗುಂಪುಗಳ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶನಿವಾರ ಬಸ್ ನಿಲ್ದಾಣದ ಆವರಣದಲ್ಲಿ ಏಕಾಏಕಿ ಲೈನ್ಔಟ್‌ ಹಾಕುತ್ತಿರುವುದನ್ನು ಗಮನಿಸಿದ ಸಮಾಜದ ಮುಖಂಡರು ವಿಚಾರಿಸಲು ತೆರಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದಿದೆ. ಈ ಬಗ್ಗೆ ಬೈಲಹೊಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಳಿಕ ಘಟನೆ ಖಂಡಿಸಿ ಸಮಗಾರ ಹರಳಯ್ಯ ಸಮಾಜದವರು ಬಸ್ ನಿಲ್ದಾಣದ ಆವರಣದಲ್ಲಿ ರಸ್ತೆ ಬಂದ್‌ ಮಾಡಿ ಧರಣಿ ನಡೆಸಿದರು. ಈ ವೇಳೆ ಸಮಾಜದ ಮುಖಂಡರಾದ ಪರಶುರಾಮ ರಾಯಬಾಗ ಹಾಗೂ ಬಸವರಾಜ ಕಿತ್ತೂರ ಮಾತನಾಡಿ, ನೂತನ ಮಳಿಗೆಗಳ ನಿರ್ಮಾಣದಿಂದ ಈ ಕುಟುಂಬಗಳ ಅಂಗಡಿಗಳಿಗೆ ತೊಂದರೆಯಾಗಲಿದೆ ಎಂದು ದೂರಿದರು. ಹೊಸ ಮಳಿಗೆಗಳನ್ನು ನಿರ್ಮಿಸಿದರೆ ಬಸ್‌ಗಳ ಸಂಚಾರ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಸಾರ್ವಜನಿಕರು ಹಾಗೂ 17 ಕುಟುಂಬಗಳ ಹಿತ ಕಾಪಾಡಬೇಕು. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಸೆ.9ರಂದು ಬಸ್ ನಿಲ್ದಾಣದ ಬಳಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಆಗ ಬೆಳಗಾವಿ ಸಾರಿಗೆ ವಿಭಾಗದ ಡಿಸಿ ಸ್ಥಳಕ್ಕೆ ಭೇಟಿ ನೀಡಿ, 17 ಕುಟುಂಬಗಳ ಅಂಗಡಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ 2–3 ದಿನಗಳ ಕಾಲಾವಕಾಶ ಕೋರಿದ್ದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿತ್ತು. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಬಳಿಕ ಸಂಜೆ ಹರಳಯ್ಯ ಸಮಾಜದವರು ಶಾಸಕರ ನಿವಾಸಕ್ಕೆ ತೆರಳಿ ಈ ಕುರಿತು ಚರ್ಚಿಸಿದ್ದು, ಶಾಸಕರು ಎರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.

ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿಪಿಐ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಬಂದೋಬಸ್ತ್‌ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಲಪ್ಪ ಮುರಗೋಡ, ಅರ್ಜುನ ರಾಯಭಾಗ, ಅಶೋಕ ಸವದತ್ತಿ, ಮಂಜು ರಾಮದುರ್ಗ, ರಾಜೇಶ ತೋರಗಲ್ಲ, ಈರಣ್ಣ ರಾಯಭಾಗ, ಸುಭಾಸ ಸವದತ್ತಿ, ಗಣೇಶ ಕಾಂಬ್ಳೆ, ಮೋಹನ ಮುರಗೋಡ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿ ಹಲವರು ಇದ್ದರು.----------

---ಕೋಟ್‌

ಟೆಂಡರ್‌ದಾರರ ವಿರುದ್ಧ ಕ್ರಮಕೈಗೊಂಡು ಮಳಿಗೆಗಳ ಟೆಂಡರ್‌ನ್ನು ರದ್ದುಪಡಿಸಬೇಕು. ಬಸ್ ನಿಲ್ದಾಣದ ಆವರಣವನ್ನು ಈಗಿರುವ ಸ್ಥಿತಿಯಲ್ಲೇ ಉಳಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಹೋರಾಟ ಮುಂದುವರಿಸುತ್ತೇವೆ.

ಬಸವರಾಜ ಕಿತ್ತೂರ, ಹರಳಯ್ಯ ಸಮಾಜದ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ: ಕಾಶಪ್ಪನವರ
ರಾಜ್ಯದ ಬರ ನಿರ್ವಹಣೆಗೆ ಸ್ಪಂದಿಸದ ಕೇಂದ್ರ: ಸಚಿವ ಕಾಶಪ್ಪನವರ