ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಅಧೀನದ ಮಳಿಗೆಗಳ ಸ್ಟಾಲೇಜ್ ಶುಲ್ಕ (ಬಾಡಿಗೆ)ವನ್ನು ಏಕಾಏಕಿ ಏರಿಕೆ ಮಾಡಿದ್ದನ್ನು ಖಂಡಿಸಿ ಹು-ಧಾ ಮಹಾನಗರ ಪಾಲಿಕೆ ಮಾರ್ಕೆಟ್ ಸ್ಟಾಲೇಜ್ ಹೋಲ್ಡರ್ಸ್ ಅಸೋಸಿಯೇಶನ್ ಸೋಮವಾರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ಅಸೋಸಿಯೇಶನ್‌ನ ನೂರಾರು ವ್ಯಾಪಾರಸ್ಥರು ತಮ್ಮ ಮಳಿಗೆ ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಾಡಿಗೆ ಹೆಚ್ಚಳಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಹಲವಾರು ವರ್ಷಗಳಿಂದ ಪಾಲಿಕೆ ಅಂಗಡಿಗಳನ್ನು ಸಣ್ಣ-ಪುಟ್ಟ ಉದ್ಯೋಗಕ್ಕಾಗಿ ಸ್ಟಾಲೇಜ್ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು, ಪಾಲಿಕೆಯ ನಿಯಮಾವಳಿಯಂತೆ ಪ್ರತಿಮೂರು ವರ್ಷಕ್ಕೆ ಶೇ. 15ರಷ್ಟು ಬಾಡಿಗೆ ಏರಿಕೆ ಮಾಡಲಾಗುತ್ತಿದೆ. ಆದರೆ, ಮಹಾನಗರ ಪಾಲಿಕೆ ಎರಡು ಬಾರಿ ತನ್ನ ನಿಯಮಾವಳಿಯನ್ನು ಮೀರಿ ಬಾಡಿಗೆ ಏರಿಸಿದೆ. ಈಗ 3ನೇ ಬಾರಿಗೆ ಮತ್ತೆ 2025-26ನೇ ಸಾಲಿನ ಬಾಡಿಗೆಯನ್ನು 2- 3 ಪಟ್ಟು ಹೆಚ್ಚಿಸುವ ಮೂಲಕ ವ್ಯಾಪಾರಿಗಳಿಗೆ ಆರ್ಥಿಕ ಹೊರೆ ಉಂಟು ಮಾಡುತ್ತಿದೆ ಎಂದು ಸ್ಟಾಲೇಜ್‌ದಾರರು ಆರೋಪಿಸಿದರು.
ಮಹಾನಗರ ಪಾಲಿಕೆ ಒಡೆತನದ ಮಾರುಕಟ್ಟೆಗಳಲ್ಲಿ ಸಣ್ಣ-ಪುಟ್ಟ ವ್ಯಾಪಾರ ಮಾಡುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕೂಡಲೇ ಪಾಲಿಕೆ ಆಯುಕ್ತರು ಹಾಗೂ ನಗರಾಭಿವೃದ್ಧಿ ಸಚಿವರು ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬಾಡಿಗೆ ಶುಲ್ಕ ಏರಿಕೆ ಹಿಂಪಡೆದು, ಯಥಾ ಸ್ಥಿತಿಯಂತೆ ಚಲನ್ ನೀಡುವಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.ನಂತರ ಪಾಲಿಕೆ ಆಯುಕ್ತರಿಗೆ ಹಾಗೂ ಸ್ಥಾಯಿ ಸಮಿತಿ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹುಬ್ಬಳ್ಳಿ ಗಾಂಧಿ ಮಾರ್ಕೆಟ್, ಜನತಾ ಬಜಾರ, ನೆಹರೂ ಮೈದಾನ, ಸ್ವಿಮ್ಮಿಂಗ್ ಪೂಲ್ ಕಾಂಪ್ಲೆಕ್ಸ್, ಗಣೇಶಪೇಟ, ಹಳೇ ಹುಬ್ಬಳ್ಳಿ, ಪೆಂಡಾರಗಲ್ಲಿ, ವಿಶ್ವೇಶ್ವರನಗರ ಸೇರಿದಂತೆ ವಿವಿಧೆಡೆಯಿಂದ ವ್ಯಾಪಾರಸ್ಥರು ಭಾಗವಹಿಸಿದ್ದರು.
ವ್ಯಾಪಾರಸ್ಥರಾದ ಪ್ರಭು ಅಂಗಡಿ, ಗಂಗಾಧರ ಸಂಗಮಶೆಟ್ಟರ, ರವಿ ಬದ್ದಿ, ಶ್ರೀಕಾಂತ ಹಿರೇಮಠ, ಆರ್.ಕೆ.ರಾಜೂರ, ರಾಜಶೇಖರ ಸಿಂಹಾಸನ, ಮನಮಿತ್‌ಸಿಂಗ್ ಕೋಲಿ ಸೇರಿದಂತೆ ಅನೇಕರು ಇದ್ದರು.