ವರಮಹಾಲಕ್ಷ್ಮೀ ಹಬ್ಬ ಖರೀದಿ ಜೋರು...!

KannadaprabhaNewsNetwork |  
Published : Aug 08, 2025, 01:02 AM IST
ಗದಗ ಮಾರುಕಟ್ಟಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಹೂ,ಹಣ್ಣು ಖರೀದಿಯಲ್ಲಿ ನಿರತರಾದ ಮಹಿಳೆಯರು. | Kannada Prabha

ಸಾರಾಂಶ

ಶ್ರಾವಣ ಮಾಸದ ಮಹತ್ವ ಹೆಚ್ಚಿಸುವ ವರಮಹಾಲಕ್ಷ್ಮಿ ಹಬ್ಬದ ಆಚರಣೆಗಾಗಿ ಗದಗ ನಗರದಲ್ಲಿ ಗುರುವಾರ ನಗರಾದ್ಯಂತ ಹಬ್ಬದ ಕಳೆಗಟ್ಟಿದೆ.

ಗದಗ: ಶ್ರಾವಣ ಮಾಸದ ಮಹತ್ವ ಹೆಚ್ಚಿಸುವ ವರಮಹಾಲಕ್ಷ್ಮಿ ಹಬ್ಬದ ಆಚರಣೆಗಾಗಿ ಗದಗ ನಗರದಲ್ಲಿ ಗುರುವಾರ ನಗರಾದ್ಯಂತ ಹಬ್ಬದ ಕಳೆಗಟ್ಟಿದೆ. ಆ.8 ರಂದು ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗುತ್ತಿದ್ದು, ಮಹಿಳೆಯರು ಹಬ್ಬಕ್ಕಾಗಿ ಸಕಲ ಸಿದ್ಧತೆಗೆ ನಗರದ ಮುಖ್ಯ ಮಾರುಕಟ್ಟೆಯಾಗಿರುವ ಬ್ಯಾಂಕ್‌ ರಸ್ತೆ, ಸ್ಟೇಷನ್‌ ರಸ್ತೆ, ಟಾಂಗಕೂಟ, ಗ್ರೇನ್‌ ಮಾರ್ಕೆಟ್, ನಾಲ್ವಾಡಗಲ್ಲಿ ಬಟ್ಟೆ ಅಂಗಡಿಗಳು, ಬಂಗಾರದ ಅಂಗಡಿ ಹಾಗೂ ಬೆಟಗೇರಿ ಭಾಗದಲ್ಲಿ ಹಬ್ಬದ ಖರೀದಿಗೆ ತಂಡೋಪತಂಡವಾಗಿ ಮಹಿಳೆಯರು ನಿಂತು ಖರೀದಿಸುತ್ತಿರುವ ದೃಶ್ಯ ಕಂಡು ಬಂದಿತು.

ಲಕ್ಷ್ಮೀ ದೇವಿ ಸಂಪತ್ತು, ಸಮೃದ್ಧಿಯ ದೇವತೆ ಎಂದು ಕರೆಯಲಾಗುತ್ತೆ. ಲಕ್ಷ್ಮಿ ದೇವಿ ನೆಲೆಸಿರುವ ಸ್ಥಳದಲ್ಲಿ ಯಾರೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುವುದಿಲ್ಲ. ಯಾವುದೇ ಸೌಕರ್ಯಗಳಿಗೆ ಕೊರತೆ ಇರೋದಿಲ್ಲ ಎಂದು ನಂಬಲಾಗಿದ್ದು, ಪ್ರತಿ ಮನೆಯಲ್ಲಿನ ಹೆಣ್ಣು ಮಕ್ಕಳು ವರಮಹಾಲಕ್ಷ್ಮೀ ವ್ರತ ಆಚರಣೆಗೆ ಮುಂದಾಗಿದ್ದಾರೆ.ವರಮಹಾಲಕ್ಷ್ಮೀ ಪೂಜೆಗೆ ಬೇಕಾದ ಕಬ್ಬು, ಬಾಳೆ, ಗುಲಾಬಿ, ಮಲ್ಲಿಗೆ, ಸೇವಂತಿಗೆ ಹೂ ವಿವಿಧ ಬಗೆಯೇ ಹೂ ಗಳು ಸೇರಿದಂತೆ ಪ್ಲಾಷ್ಟಿಕ್‌ ಅಲಂಕಾರಿಕ ಹೂಗಳು ಹಾಗೂ ವಿವಿಧ ಬಗೆಯ ಹಣ್ಣುಗಳ ಖರೀದಿಯಲ್ಲಿ ಎಲ್ಲೇಡೆ ಜೋರಾಗಿತ್ತು. ಅಷ್ಠೇ ಅಲ್ಲದೆ ಬಟ್ಟೆ ಅಂಗಡಿಗಳು, ಬಂಗಾರದ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿದ್ದವು.

​ಹೂ ಹಣ್ಣಿಗೆ ಭಾರೀ ಬೇಡಿಕೆ: ​ವರಮಹಾಲಕ್ಷ್ಮಿ ಪೂಜೆಯಲ್ಲಿ ಪ್ರಮುಖ ಸ್ಥಾನ ಪಡೆಯುವ ಹೂವು, ಹಣ್ಣು, ಮತ್ತು ಪೂಜಾ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಗಳಲ್ಲಿಯೂ ತುಸು ಏರಿಕೆ ಕಂಡುಬಂದಿದೆ. ಸೇಬು, ಬಾಳೆಹಣ್ಣು, ದಾಳಿಂಬೆ ಮತ್ತು ಪೇರಳೆ ಹಣ್ಣುಗಳನ್ನು ಖರೀದಿಸಲು ಮಹಿಳೆಯರು ಮುಗಿಬಿದ್ದಿದ್ದಾರೆ. ಜತೆಗೆ, ಸೇವಂತಿ, ಮಲ್ಲಿಗೆ, ಗುಲಾಬಿ ಮತ್ತು ಕನಕಾಂಬರ ಹೂವುಗಳಿಗೂ ಭಾರಿ ಬೇಡಿಕೆ ಬಂದಿದೆ. ‍‍ವ್ರತಕ್ಕಾಗಿ ಮುತ್ತೈದೆಯರಿಗೆ ನೀಡುವ ಮಂಗಳಕರ ವಸ್ತುಗಳಾದ ಕಣಕ, ತೆಂಗಿನಕಾಯಿ, ತಾಂಬೂಲ ಮತ್ತು ಬಾಗಿನ ವಸ್ತು ಮಹಿಳೆಯರು ಉತ್ಸಾಹದಿಂದ ಖರೀದಿಸಿದರು.

ಮನೆಗಳಲ್ಲಿ ಶೃಂಗಾರ: ​ನಗರದ ಪ್ರಮುಖ ಬಡಾವಣೆಗಳಲ್ಲಿನ ಮನೆಗಳಲ್ಲಿ ಪೂಜೆ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಳಿದ್ದಾರೆ. ರಸ್ತೆಗಳ ಇಕ್ಕೆಲಗಳಲ್ಲಿ ಬಾಳೆ ಕಂಬ ಹಾಕಲಾಗಿದ್ದು, ಇದು ಹಬ್ಬದ ವಾತಾವರಣ ಮತ್ತಷ್ಟು ಹೆಚ್ಚಿಸಿದೆ.

​ಮಹಿಳೆಯರ ಉತ್ಸಾಹ:

​ಮನೆಯಲ್ಲಿ ಲಕ್ಷ್ಮಿಯ ವಿಗ್ರಹ ಅಥವಾ ಕಲಶ ಪ್ರತಿಷ್ಠಾಪಿಸಿ, ಸೀರೆ, ಆಭರಣಗಳಿಂದ ಅಲಂಕರಿಸಿ ಕುಟುಂಬದ ಸಂತೋಷ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ಮಹಿಳೆಯರು ಶ್ರದ್ಧೆಯಿಂದ ಆಚರಿಸುತ್ತಾರೆ. ಪೂಜೆಯ ನಂತರ ಮುತ್ತೈದೆಯರನ್ನು ಮನೆಗೆ ಕರೆದು, ಉಡಿ ತುಂಬಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ನಗರದಲ್ಲಿನ ಪ್ರಮುಖ ಸಂಪ್ರದಾಯವಾಗಿದೆ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮೀ ಹಬ್ಬದ ತಯಾರಿ ಜೋರಾಗಿ ನಡೆದಿದ್ದು, ನಗರದ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳ ಖರೀದಿಯಲ್ಲಿ ಗುರುವಾರ ನಿರಂತರ ಸುರಿಯುತ್ತಿರುವ ಮಳೆಯಲ್ಲಿಯೇ ಮಹಿಳೆಯರು ಹಬ್ಬದ ಖರೀದಿಯಲ್ಲಿ ನಿರತರಾಗಿದ್ದರು.

ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಜನತೆಯ ಮುಗದಲ್ಲಿ ನಗುವಿನ ಮಂದಹಾಸ ಬಿರಿ, ಹಬ್ಬದ ಸಂಭ್ರಮವನ್ನ ಮತ್ತಷ್ಟು ಇಮ್ಮಡಿಗೊಳಿಸಿದೆ.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್