ರಾಗಿಯಲ್ಲಿ ಸಾಮಾನ್ಯವಾಗಿ ಕಾಂಡ ಕೊರೆಯುವ ಹುಳು, ಎಲೆ ಮುದುಡುವ ಕೀಟ, ತೆನೆಗೂಡು ಮಾರು ಹುಳು, ಸಸ್ಯಹೇನು ಹಾಗೂ ಮುಂತಾದ ಕೀಟಗಳ ಹಾವಳಿ ಕಂಡುಬರುತ್ತದೆ. ಕೀಟಗಳ ಬಾಧೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಬಾಧಿತ ಎಲೆಗಳು ಮತ್ತು ಸಸ್ಯ ಭಾಗಗಳನ್ನು ಸಂಗ್ರಹಿಸಿ ನಾಶಪಡಿಸುವುದು, ಹೊಲವನ್ನು ಸ್ವಚ್ಛವಾಗಿಡುವುದು ಹಾಗೂ ಅತಿಯಾದ ದಟ್ಟ ಬಿತ್ತನೆಯನ್ನು ತಪ್ಪಿಸಬೇಕು.
ತಿಪಟೂರು: ರಾಗಿಯು ಜಿಲ್ಲೆಯ ಪ್ರಮುಖ ಖುಷ್ಕಿ ಬೆಳೆಯಾಗಿದ್ದು ಈ ಬೆಳೆಯನ್ನು ತಡವಾದ ಮುಂಗಾರು (ಆಗಸ್ಟ್- ಸೆಪ್ಟೆಂಬರ್) ನಲ್ಲಿಯೂ ಬಿತ್ತನೆ ಮಾಡಿ ಹೆಚ್ಚಿನ ಇಳುವರಿ ಪಡೆಯಬಹುದು. ಅಲ್ಪಾವಧಿ ರಾಗಿ ತಳಿಗಳಾದ ಕೆ.ಎಂ.ಆರ್- ೨೦೪, ೩೪೦, ೬೩೦, ೩೧೬, ಎಂ.ಎಲ್ -೩೬೫, ಎಂ.ಎಲ್ ೩೨೨ ಬಿತ್ತನೆ ಮಾಡಬೇಕೆಂದು ಕೊನೇಹಳ್ಳಿ ಕೆವಿಕೆ ಬೇಸಾಯ ಶಾಸ್ತ್ರಜ್ಞೆ ಡಾ. ತಸ್ಮಿಯಾ ಕೌಸರ್ ಹಾಗೂ ಸಸ್ಯ ಸಂರಕ್ಷಣೆ ವಿಜ್ಞಾನಿ ಸಕ್ಲೇನ್ ಮುಸ್ತಾಕ್ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಪಾವಧಿ ತಳಿ ರಾಗಿ ಬೀಜಗಳನ್ನು ಬಿತ್ತುವ ಮೊದಲು, ಪ್ರತಿ ಕೆಜಿ ಬೀಜಕ್ಕೆ ೨೦ ಗ್ರಾಂ ಅಜೋಸ್ಪಿರಿಲಂ ಅಥವಾ ಎ.ಎಂ.ಸಿ ಇಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು. ಬಿತ್ತನೆಯ ಸಮಯದಲ್ಲಿ ೧೦ ಕಿಗ್ರಾಂ ಸಾರಜನಕ, ೧೬ ಕಿಗ್ರಾಂ ರಂಜಕ ಮತ್ತು ೧೦ ಕಿಗ್ರಾಂ ಪೊಟ್ಯಾಷ್, ೫ ಕೆಜಿ ಸತುವಿನ ಸಲ್ಫೇಟ್ ಹಾಗೂ ೪ ಕೆಜಿ ಬೋರಾಕ್ಸ್ ಅನ್ನು ಮಣ್ಣಿಗೆ ಸಾಲು ಬಿತ್ತನೆ ಮಾಡುವುದರಿಂದ ಒಳ್ಳೆಯ ಇಳುವರಿಯನ್ನು ಪಡೆಯಬಹುದು. ಬಿತ್ತನೆ ಮಾಡಿದ ರಾಗಿ ಬೆಳೆಯಲ್ಲಿ ಅಡ್ಡ ಅಂತರ ಬೇಸಾಯ ಮಾಡುವುದರಿಂದ ಅಗತ್ಯವಿಲ್ಲದ ಗಿಡಗಳನ್ನು ತೆಗೆದು ಹಾಕಿ ಗಿಡಗಳ ನಡುವೆ ಸೂಕ್ತ ಅಂತರವನ್ನು ಕಾಯ್ದುಕೊಳ್ಳಬಹುದು. ಅಲ್ಲದೆ ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಸಹಾಯವಾಗುತ್ತದೆ. ಬಿತ್ತನೆಯ ದಿನ ಅಥವಾ ಬಿತ್ತನೆ ಮಾಡಿದ ಮೂರನೇ ದಿನ ಆಕ್ಸಿಪ್ಲೋರೋಫಿನ್ ೧ ಮಿ.ಲಿ. ಪ್ರತಿ ಲೀಟರ್ ನೀರಿಗೆ ಅಥವಾ ಬ್ಯೂಟಕ್ಲೋರ್ ೩ ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಮಣ್ಣಿಗೆ ಸಿಂಪರಣೆ ಮಾಡುವುದರಿಂದ ಕಳೆ ಹುಲ್ಲನ್ನು ನಿಯಂತ್ರಣ ಮಾಡಬಹುದು. ಬಿತ್ತನೆ ಮಾಡಿದ ೨೦ ರಿಂದ ೨೫ ದಿನಕ್ಕೆ ೨,೪-ಡಿ ಸೋಡಿಯಂ ಸಾಲ್ಟ್ ೨.೫ ಗ್ರಾಂ ಪ್ರತಿ ಲೀಟರ್ ಗೆ ಮಿಶ್ರಣ ಮಾಡಿ ಸಿಂಪರಣೆ ಮಾಡುವುದರಿಂದ ಪ್ರಮುಖ ಕಳೆಯಾದ ಅಣ್ಣೆ ಕಡ್ಡಿಯನ್ನು ನಿಯಂತ್ರಿಸಬಹುದು.ರಾಗಿಯಲ್ಲಿ ಸಾಮಾನ್ಯವಾಗಿ ಕಾಂಡ ಕೊರೆಯುವ ಹುಳು, ಎಲೆ ಮುದುಡುವ ಕೀಟ, ತೆನೆಗೂಡು ಮಾರು ಹುಳು, ಸಸ್ಯಹೇನು ಹಾಗೂ ಮುಂತಾದ ಕೀಟಗಳ ಹಾವಳಿ ಕಂಡುಬರುತ್ತದೆ. ಕೀಟಗಳ ಬಾಧೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಬಾಧಿತ ಎಲೆಗಳು ಮತ್ತು ಸಸ್ಯ ಭಾಗಗಳನ್ನು ಸಂಗ್ರಹಿಸಿ ನಾಶಪಡಿಸುವುದು, ಹೊಲವನ್ನು ಸ್ವಚ್ಛವಾಗಿಡುವುದು ಹಾಗೂ ಅತಿಯಾದ ದಟ್ಟ ಬಿತ್ತನೆಯನ್ನು ತಪ್ಪಿಸಬೇಕು. ಕೀಟಗಳ ಹಾವಳಿ ಹೆಚ್ಚಾಗಿ ಆರ್ಥಿಕ ಹಾನಿ ಉಂಟುಮಾಡುವ ಮಟ್ಟಕ್ಕೆ ಬಂದಲ್ಲಿ ಮಾತ್ರ ನಿರ್ದಿಷ್ಟ ಕೀಟಗಳಿಗೆ ಶಿಫಾರಸು ಮಾಡಲಾದ ಕೀಟನಾಶಕವನ್ನು ಸರಿಯಾದ ಪ್ರಮಾಣದಲ್ಲಿ ಸಿಂಪಡಿಸಬೇಕು. ರಾಗಿಯಲ್ಲಿ ಪ್ರಮುಖವಾಗಿ ಬೆಂಕಿರೋಗ (ಎಲೆ ಬೆಂಕಿರೋಗ, ಕುತ್ತಿಗೆ ಬೆಂಕಿರೋಗ ಹಾಗೂ ತೆನೆ/ಇಲುಕು ಬೆಂಕಿರೋಗ) ಕಂಡುಬರುತ್ತವೆ. ಈ ರೋಗದ ಶಿಲೀಂಧ್ರವು ಬೀಜದ ಮೂಲವಾಗಿದ್ದು, ಗಾಳಿಯಿಂದ ಹರಡುತ್ತದೆ. ರೋಗ ನಿರ್ವಹಣೆಗೆ ಆರೋಗ್ಯಕರ ರೋಗಮುಕ್ತ ಬೀಜವನ್ನು ಬಳಸುವುದು, ಬಿತ್ತನೆಗೂ ಮೊದಲು ಕಾರ್ಬೆಂಡಜಿಮ್ ೨ಗ್ರಾಂ/ಕೆ.ಜಿ. ಬೀಜ ಅಥವಾ ಸ್ಯೂಡೋಮೋನಾಸ್ ಫ್ಲೋರಸೆನ್ಸ್ ೧೦ ಗ್ರಾಂ/ಕೆ.ಜಿ. ಬೀಜದಿಂದ ಬೀಜೋಪಚಾರ ಮಾಡುವುದು, ಸಮತೋಲಿತ ಗೊಬ್ಬರ ಬಳಸಿ ಹೆಚ್ಚಿನ ಸಾರಜನಕ ಬಳಕೆಯನ್ನು ತಪ್ಪಿಸುವುದು ಹಾಗೂ ಸೂಕ್ತ ಗಿಡದ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಜೈವಿಕ ನಿರ್ವಹಣೆಯಲ್ಲಿ ಸ್ಯೂಡೋಮೋನಾಸ್‌ಫ್ಲೋರಸೆನ್ಸ್ ೧೦ಗ್ರಾಂ/ಲೀಟರ್ ನೀರಿಗೆ ಹೂಬಿಡುವ/ ತೆನೆ ಹೊರಬರುವ ಹಂತದಲ್ಲಿ ಸಿಂಪಡಿಸಿ, ಅಗತ್ಯವಿದ್ದಲ್ಲಿ ೧೦ ದಿನಗಳ ನಂತರ ಪುನಃ ಸಿಂಪಡಿಸುವುದು. ಬೆಂಕಿರೋಗದ ತೀವ್ರತೆ ಹೆಚ್ಚಾಗದಂತೆ ಹೊಲದಲ್ಲಿ ನಿರಂತರ ತೇವಾಂಶ ಮತ್ತು ಹೆಚ್ಚಿನ ಸಾರಜನಕ ಬಳಕೆಯನ್ನು ತಪ್ಪಿಸಿ, ರೋಗಬಾಧಿತ ಸಸ್ಯಾವಶೇಷಗಳನ್ನು ತೆಗೆದು ನಾಶಪಡಿಸುವುದು ಸೂಕ್ತ ಕ್ರಮವಾಗಿದ್ದು ರೈತರು ಇವೆಲ್ಲವನ್ನೂ ಗಮನಿಸಿ ಬರಗಾಲದಲ್ಲೂ ಉತ್ತಮ ರಾಗಿ ಇಳುವರಿ ಪಡೆಯಬಹುದೆಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.