ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದ ಅಭಿವೃದ್ಧಿಗಾಗಿ ಸಂಕಲ್ಪ ತೊಟ್ಟು ದುಡಿಯುತ್ತಿರುವ ಲಯನ್ ಸಂಸ್ಥೆಗಳ ಕಾರ್ಯ ಅನುಕರಣೆಯ ಎಂದು ಲಯನ್ ಸಂಸ್ಥೆಯ ಮಲ್ಟಿಪಲ್ ಕೌನ್ಸಿಲ್ ಮಾಜಿ ಚೇರ್ಮನ್ ಡಾ.ಕೃಷ್ಣೇಗೌಡ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ಒಡನಾಡಿ ಮತ್ತು ನಾಲ್ವಡಿ ಲಯನ್ ಸಂಸ್ಥೆಗಳ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಲಯನ್ ಸಂಸ್ಥೆಗಳು ಕ್ರಿಯಾಶೀಲವಾಗಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ಬೇರೆ ಜಿಲ್ಲೆಗಳಿಗೆ ಮಾದರಿಯಾಗಿವೆ ಎಂದು ಬಣ್ಣಿಸಿದರು.

ಅಕ್ಷರ, ಅನ್ನ, ಆರೋಗ್ಯ ಕ್ಷೇತ್ರಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜದ ನೊಂದವರ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಕೃಷಿ, ಉದ್ಯಮಶೀಲತೆ, ರಂಗಭೂಮಿ ಮತ್ತು ಜಾನಪದ ಕ್ಷೇತ್ರಗಳಲ್ಲೂ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.

ನೂತನ ಪದಾಧಿಕಾರಿಗಳಿಗೆ ಲಯನ್ಸ್ ಸಂಸ್ಥೆ ಮಾಜಿ ಜಿಲ್ಲಾ ರಾಜ್ಯಪಾಲ ಡಾ.ಜಿ.ಎ.ರಮೇಶ್ ಪ್ರತಿಜ್ಞಾವಿಧಿ ಭೋಧಿಸಿದರು. ನೂತನ ಪದಾಧಿಕಾರಿಗಳು ತಮ್ಮ ದುಡಿಮೆಯ ಆದಾಯದಲ್ಲಿ ಇಂತಿಷ್ಟು ಹಣವನ್ನು ಸಮುದಾಯದ ಸೇವೆಗಳಿಗಾಗಿ ಮೀಸಲಿಟ್ಟು, ಆರೋಗ್ಯ, ಪರಿಸರ ಹಾಗೂ ಗ್ರಾಮ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರತಿ ತಿಂಗಳು ಹಮ್ಮಿಕೊಳ್ಳುವ ಮೂಲಕ ತಮಗೆ ನೀಡಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಸೇವಾ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದರು.


ಒಡನಾಡಿ ಮತ್ತು ನಾಲ್ವಡಿ ಲಯನ್ಸ್ ಸಂಸ್ಥೆಗಳಿಗೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪಿಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಜಯಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಒಡನಾಡಿ ಲಯನ್ಸ್ ಸಂಸ್ಥೆ ಯುವ ರೈತ ಬಾಂಧವರಿಗೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನೂತನವಾಗಿ ಹೂರತಂದಿರುವ ಎಳ್ಳು- ಬೆಲ್ಲ ಉಗಮ ಬ್ರಾಂಡ್‌ನ್ನು ಬಿಡುಗಡೆಗೊಳಿಸಲಾಯಿತು.

ಒಡನಾಡಿ ಸಂಸ್ಥೆಯ ಅಧ್ಯಕ್ಷರಾಗಿ ಕಾರಸವಾಡಿ ಮಹದೇವ, ನಾಲ್ವಡಿ ಸಂಸ್ಥೆಯ ಅಧ್ಯಕ್ಷರಾಗಿ ರವೀಲಾ ಅಧಿಕಾರ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಪ್ರಾಂತಿಯ ಅಧ್ಯಕ್ಷೆ ಪ್ರತಿಮಾ ರಮೇಶ್, ಚಂದ್ರಲಿಂಗು, ವಲಯ ಅಧ್ಯಕ್ಷ ಚಂದ್ರಹಾಸ, ಕಾವ್ಯ ನಿತ್ಯಾನಂದ, ನಾಲ್ವಡಿ ಲಯನ್ ಸಂಸ್ಥೆ ಸಂಸ್ಥಾಪಕ ಹನುಮಂತಯ್ಯ ಒಡನಾಡಿ ಲಯನ್ಸ್ ಸಂಸ್ಥೆ ಸಂಸ್ಥಾಪಕ ಚಿಕ್ಕ ಸ್ವಾಮಿ ಉಪಸ್ಥಿತರಿದ್ದರು.

ನಾಡಿನ ಹೆಸರಾಂತ ಜಾನಪದ ಮತ್ತು ರಂಗಭೂಮಿ ಕ್ಷೇತ್ರದ ಗಾಯಕರಾದ ಹುರುಗಲವಾಡಿ ರಾಮಯ್ಯ ಮತ್ತು ಮಂಜುಳಾ ಆಲದಹಳ್ಳಿ ಇವರ ತಂಡದಿಂದ ಜಾಗೃತಿ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.