ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಪಟ್ಟಣದ 100 ಹಾಸಿಗೆಗಳ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ರೋಗಿಗಳಿಗೆ ಹಾಸಿಗೆಯ ಕೊರತೆ ಉಗುತ್ತಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಣೇಶ್ ಭಟ್ ಹೇಳಿದರು. ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ರೋಗಿಗಳ ಒತ್ತಡದಿಂದ ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸುವಂತಾಗಿದೆ. ಹೆರಿಗೆ ಸಂಖ್ಯೆಯೂ ಹೆಚ್ಚುತ್ತಿದ್ದು, ಕೊಪ್ಪ ಹೊಸನಗರ ಶೃಂಗೇರಿ ತಾಲೂಕುಗಳಿಂದಲೂ ಈ ಆಸ್ಪತ್ರೆಗೆ ಜನರು ಗಣನೀಯ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದರು. ಆಸ್ಪತ್ರೆಯ ರಕ್ತ ಪರೀಕ್ಷೆ ಲ್ಯಾಬ್ ಕಿರಿದಾಗಿದೆ. ರಕ್ತ ಪರೀಕ್ಷೆಗೆ ಹೆಚ್ಚು ಒತ್ತಡವಿದ್ದು, ಈ ವಿಭಾಗವನ್ನು ಅಗತ್ಯಕ್ಕೆ ಅನುಗುಣವಾಗಿ ವಿಸ್ತಾರಗೊಳಿಸಬೇಕಿದೆ. ಆಸ್ಪತ್ರೆಯಲ್ಲಿ ದಿನಕ್ಕೆ 150ಕ್ಕೂ ಹೆಚ್ಚು ರಕ್ತ ಪರೀಕ್ಷೆ ನಡೆಸಬೇಕಾಗುತ್ತದೆ. 10 ಐಸೋಲೇಶನ್ ವಾರ್ಡ್ ಕಾಮಗಾರಿ ಕೂಡ ನಡೆಯುತ್ತಿದೆ. ಆಕ್ಸಿಜನ್ ಪ್ಲಾಂಟ್‌ನಿಂದ ಎಲ್ಲ 100 ಹಾಸಿಗೆಗಳಿಗೂ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ನಟರಾಜ್ ಮಾತನಾಡಿ, ತಾಲೂಕಿನಲ್ಲಿ ಜನವರಿಯಿಂದ 30 ಡೆಂಘೀಜ್ವರ ಪ್ರಕರಣ ದಾಖಲಾಗಿವೆ. ಮಂಗನ ಕಾಯಿಲೆಗೆ ಈ ವರ್ಷ ಲಸಿಕೆ ಲಭ್ಯ ಇಲ್ಲದ ಕಾರಣ ಜನರು ತೀವ್ರ ಮುಂಜಾಗ್ರತೆ ವಹಿಸಬೇಕಾಗಿದೆ. ಈ ವರ್ಷ ಜನವರಿಯಿಂದ 10 ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು. ಬಿಇಒ ವೈ.ಗಣೇಶ್ ಮಾತನಾಡಿ, ವಿದ್ಯಾರ್ಥಿಗಳ ಕೊರತೆಯಿಂದಾಗಿ ತಾಲೂಕಿನಲ್ಲಿ ಈ ವರ್ಷ 5 ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಈ ಮೊದಲು ಮುಚ್ಚಿರುವ ಶಾಲೆಗಳು ಕೂಡ ತೆರೆದಿಲ್ಲ. ಅಂದಗೆರೆ, ಶಂಕರಳ್ಳಿ, ದೋಣಿಹಕ್ಕಲು, ಮುಳುಕೇವಿ ಮತ್ತು ದಾಸನಕೊಡಿಗೆ ಮುಚ್ಚಿರುವ ಶಾಲೆಗಳು. ಪ್ರಾಥಮಿಕ ವಿಭಾಗದಲ್ಲಿ 125 ಮತ್ತು ಪ್ರೌಢಶಾಲಾ ವಿಭಾಗದಲ್ಲಿ 34 ಶಿಕ್ಷಕರು ಸೇರಿ 159 ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಜೆಜೆಎಂ ಯೋಜನೆಯ ಕಾಮಗಾರಿಗಳ ಟೆಂಡರ್ ಸೇರಿದಂತೆ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಆರಗ ಜ್ಞಾನೇಂದ್ರ, ಗುತ್ತಿಗೆದಾರರು ಬಳ್ಳಾರಿ ಗುಲ್ಬರ್ಗಾ ದವರೇ ಯಾಕೇ ಬೇಕು? ಸ್ಥಳೀಯರಿಗೆ ಈ ಕೆಲಸ ನಿರ್ವಹಿಸುವ ಅರ್ಹತೆ ಇಲ್ಲವೇ? ಇದೇನು ಬ್ರಹ್ಮವಿದ್ಯೆಯೇ ಎಂದೂ ಪ್ರಶ್ನಿಸಿದರು. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ತಾಪಂ ಆಡಳಿತಾಧಿಕಾರಿ ಗಣೇಶ್ ಹಾಗೂ ಕಾರ್ಯನಿರ್ವಣಾಧಿಕಾರಿ ಎಂ.ಶೈಲಾ, ಟಿ.ಜೆ.ಅನಿಲ್ ಮುರಳಿ ಹಾಗೂ ವೆಂಕಟೇಶ್ ಇದ್ದರು. - - - -17ಟಿಟಿಎಚ್01: ಕೆಡಿಪಿ ಸಭೆ ಆರಂಭಕ್ಕೆ ಮುನ್ನ ಗ್ರಾಪಂಗಳ 2ನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ನೆನಪಿನ ಕಾಣಿಕೆ ನೀಡಿ, ಶಾಸಕ ಆರಗ ಜ್ಞಾನೇಂದ್ರ ಶುಭ ಹಾರೈಸಿದರು.