ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿ, ಶುಗರ್‌ ಮಾತ್ರೆಗೆ ಬರ!

KannadaprabhaNewsNetwork |  
Published : Dec 23, 2023, 01:45 AM ISTUpdated : Dec 23, 2023, 01:46 AM IST
 | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿ, ಶುಗರ್‌ ಮಾತ್ರೆ ಸೇರಿದಂತೆ ಕೆಲ ಔಷಧಿಗಳಿಗೆ ಬರ ಬಂದೊದಗಿದ್ದು ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಔಷಧಿ ಖರೀದಿಸಲು ಆರೋಗ್ಯ ರಕ್ಷಾ ಸಮಿತಿಗೆ ಅಧಿಕಾರ ಇಲ್ಲದ ಕಾರಣ ಬಡ ರೋಗಿಗಳಿಗೆ ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ.

ಕೆಲವು ರೋಗಗಳಿಗೆ ನೀಡುವ ಅಗತ್ಯ ಔಷಧಿಗಳ ಕೊರತೆ । ಬಡ ರೋಗಿಗಳ ಪರದಾಟ । ಔಷಧಿ ಖರೀದಿಗೆ ಟೆಂಡರ್‌ ಕರೆಯದೆ ನಿರ್ಲಕ್ಷ್ಯ ಆರೋಪರಂಗೂಪುರ ಶಿವಕುಮಾರ್

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರಾಜ್ಯದಲ್ಲಿ ಮಳೆ ಇಲ್ಲದೆ ಬರ ಎದುರಾದ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿ, ಶುಗರ್‌ ಮಾತ್ರೆ ಸೇರಿದಂತೆ ಕೆಲ ಔಷಧಿಗಳಿಗೆ ಬರ ಬಂದೊದಗಿದ್ದು ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಗಳಲ್ಲಿ ಔಷಧಿ ಸೇರಿದಂತೆ ಪರಿಕರ, ಮೂಲ ಸೌಕರ್ಯಗಳ ಖರೀದಿಸಲು ಆರೋಗ್ಯ ರಕ್ಷಾ ಸಮಿತಿಗೆ ಅಧಿಕಾರ ಇಲ್ಲದ ಕಾರಣ ಬಡ ರೋಗಿಗಳಿಗೆ ಆಸ್ಪತ್ರೆಯಲ್ಲಿ ಔಷಧ ಸಿಗದೆ ತೊಂದರೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ.

ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಾದ ಸಮಯದಲ್ಲಿ ಆರೋಗ್ಯ ಇಲಾಖೆಯ ಆಯುಕ್ತರ ಆಡಳಿತಾತ್ಮಕ ಅನುಮತಿ ಪಡೆಯುವ ತನಕ ಬಡ ರೋಗಿಗಳಿಗೆ ಪಾಡೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ.

ಆಸ್ಪತ್ರೆಗಳಲ್ಲಿ ಅಗತ್ಯವಾಗಿ ಬೇಕಾದ ಔಷಧಿಗಳ ಖರೀದಿಗೆ ಆರೋಗ್ಯ ರಕ್ಷಾ ಸಮಿತಿಗೆ ಅಧಿಕಾರಿ ಇಲ್ಲ ಎನ್ನುವುದಾದರೆ ಆರೋಗ್ಯ ರಕ್ಷಾ ಸಮಿತಿಗಳೇಕೆ ಬೇಕು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಆಸ್ಪತ್ರೆಗಳ ಔಷಧಿ ಖರೀದಿಗೆ ಟೆಂಡರ್‌ ಕರೆದು ಔಷಧಿ ಬರುವ ತನಕ ಗ್ರಾಮಾಂತರ ಪ್ರದೇಶದ ಬಡ ರೋಗಿಗಳ ಕಥೆ ಏನು?ಪ್ರತಿಯೊಂದಕ್ಕೂ ಆಯುಕ್ತರ ಅನುಮತಿ ಪಡೆದೇ ಖರೀದಿ ಮಾಡುವ ತನಕ ರೋಗಿಗೆ ಔಷಧಿಗಳು ಬೇಡವೇ ಎಂದು ಸಾರ್ವಜನಿಕರು ಕೇಳಿದ್ದಾರೆ.

ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಾ ಸಮಿತಿಗಳು ಅಸ್ತಿತ್ವದಲ್ಲಿದ್ದರೂ ಆಡಳಿತಾತ್ಮಕ ಅಧಿಕಾರ ಮೊಟಕುಗೊಂಡಿರುವ ಕಾರಣ ಆರೋಗ್ಯ ರಕ್ಷಾ ಸಮಿತಿಗಳು ಇದ್ದೂ ಇಲ್ಲದಂತಾಗಿದೆ. ಆಯುಕ್ತರ ಹೊಸ ಆದೇಶದಿಂದ ಆರೋಗ್ಯ ರಕ್ಷಾ ಸಮಿತಿ ಹಲ್ಲು ಕಿತ್ತ ಹಾವಿನಂತಾಗಲಿದೆ ಎಂಬ ಮಾತು ಕೇಳಿ ಬಂದಿದೆ.

ಆರೋಗ್ಯ ರಕ್ಷಾ ಸಮಿತಿಗಳಿದ್ದರೂ ೧೦ ಸಾವಿರ ರು. ಒಳಗೆ ಮಾತ್ರ ಔಷಧಿ ಖರೀದಿಸಲು ಅವಕಾಶವಿದೆ. ಹೆಚ್ಚು ಔಷಧ ಖರೀದಿಗೆ ಆರೋಗ್ಯ ಇಲಾಖೆಯ ಆಯುಕ್ತರ ಅನುಮತಿ ಪಡೆಯಬೇಕಿರುವ ಕಾರಣ ಆಯುಕ್ತರ ಅನುಮತಿ ಸಿಗುವ ತನಕ ಔಷಧ ಖರೀದಿಲು ಆಗುತ್ತಿಲ್ಲ ಎನ್ನಲಾಗಿದೆ.

ಬರವಿರುವ ಔಷಧಿಗಳಿವು

ಬಿಪಿ, ಶುಗರ್‌, ಮಾನಸಿಕ ರೋಗಿಗಳ ಔಷಧ, ಬಿ ಕಾಂಪ್ಲೆಕ್ಸ್‌, ಕೆಲ ಟಾನಿಕ್‌ಗಳು ಬಹುತೇಕ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ. ಈ ಔಷಧಿ ಸಿಗದ ಕಾರಣ ವೈದ್ಯರು ರೋಗಿಗಳಿಗೆ ಕ್ಲಿನಿಕ್‌ಗೆ ಬಿಳಿ ಚೀಟಿ ಬರೆದು ಕೊಡುತ್ತಿದ್ದಾರೆ ಎಂದು ರೋಗಿಗಳು ಕನ್ನಡಪ್ರಭದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಟೆಂಡರ್‌ ಆಗದ ಕಾರಣ ಕೆಲ ಔಷಧಿಗಳ ಕೊರತೆ ಆಸ್ಪತ್ರೆಗಳಲ್ಲಿ ಎದುರಾಗಿದೆ. ಆರೋಗ್ಯ ರಕ್ಷಾ ಸಮಿತಿ, ಆಯುಷ್ಮಾನ್‌ ಭಾರತ್‌ ಹಣದಲ್ಲಿ ಕೆಲ ಔಷಧ ಖರೀದಿಸಲು ಅವಕಾಶವಿದೆ. ಹೊಸ ವರ್ಷದಲ್ಲಿ ಔಷಧದ ಬರ ನೀಗಲಿದೆ.

ಡಾ.ಅಲೀಂ ಪಾಶ,ತಾಲೂಕು ಆರೋಗ್ಯಾಧಿಕಾರಿ.

ರಾಜ್ಯದಲ್ಲಿ ಬರ ಎದುರಾಗಿ ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ ಬಿಪಿ,ಶುಗರ್‌ ಮಾತ್ರೆಗಳು ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ. ಹಣ ಕೊಟ್ಟು ಖರೀದಿಸಲು ಆಗುತ್ತಿಲ್ಲ. ಸರ್ಕಾರ ಕೂಡಲೇ ಕನಿಷ್ಠ ಬಿಪಿ, ಶುಗರ್‌ ಮಾತ್ರೆ ಕೊಡಿಸಿ ಪುಣ್ಯ ಕಟ್ಟಿಕೊಳ್ಳಲಿ.

ರಾಮಶೆಟ್ಟಿ, ಕೂಲಿ ಕಾರ್ಮಿಕ, ಗುಂಡ್ಲುಪೇಟೆ.

ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!