ಮಡಿಕೇರಿ: ಇಲ್ಲಿನ ನಗರಸಭೆಯ ಸಾಮಾನ್ಯ ಸಭೆ ಗುರುವಾರ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆಯೇ ಪ್ರಮುಖ ಚರ್ಚೆಯಾಯಿತು.
ಇತ್ತೀಚೆಗೆ ಉಪಲೋಕಾಯುಕ್ತರು ನಗರಸಭೆಗೆ ಭೇಟಿ ನೀಡಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು.ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಬೀದಿ ನಾಯಿ ನಿಯಂತ್ರಣಕ್ಕೆ ಶೆಡ್ ಸಿದ್ಧವಾಗಿದ್ದು, ಶೀಘ್ರದಲ್ಲೇ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಆರಂಭವಾಗಲಿದೆ. ದಾಸವಾಳ ಕೆರೆಯನ್ನು ಉಳಿಸಿಕೊಂಡೇ ಪಾರ್ಕ್ ಅಭಿವೃದ್ಧಿ ಮಾಡಲಾಗುವುದು ಎಂದರು.
ಪೌರಾಯುಕ್ತ ಎಚ್.ಆರ್. ರಮೇಶ್ ಮಾತನಾಡಿ, ನಗರದಲ್ಲಿ ಕಸ ವಿಲೇವಾರಿಗೆ ಜಾಗದ ತೀವ್ರ ಕೊರತೆ ಇದೆ. ಇನ್ನೊಂದು ವಾರದಲ್ಲಿ ಕಸ ಎತ್ತಲು ಸಾಧ್ಯವಾಗದ ಪರಿಸ್ಥಿತಿ ಬರಲಿದೆ. ದಾಸವಾಳ ಪಾರ್ಕ್‌ನ ಕೆರೆಗೆ ಶೌಚಾಲಯದ ನೀರು ಸೇರುತ್ತಿದ್ದ ಕಾರಣ ಮುಚ್ಚಲಾಗಿತ್ತು. ಹಸಿ ಕಸದಿಂದ ಮನೆಯಲ್ಲೇ ಗೊಬ್ಬರ ತಯಾರಿಸುವ ಯೋಜನೆಗೆ ಒಂದು ಸಂಸ್ಥೆ ಮುಂದೆ ಬಂದಿದೆ. ಕಲ್ಯಾಣ ಮಂಟಪ, ಸರ್ಕಾರಿ ಆಸ್ಪತ್ರೆ, ಹೋಟೆಲ್ ಪಾರ್ಸೆಲ್‌ನಿಂದ ಹೆಚ್ಚು ಕಸ ಬರುತ್ತಿದೆ. ಮರುಬಳಕೆ ತಟ್ಟೆ-ಲೋಟ ಬಳಕೆಗೆ ಸೂಚಿಸಬೇಕು ಎಂದರುಸದಸ್ಯ ಎಸ್.ಸಿ. ಸತೀಶ್ ಮಾತನಾಡಿ, ಕಸದ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಹೆಚ್ಚುವರಿ ಜಾಗ ಪಡೆಯಬೇಕು ಎಂದರು.ಸದಸ್ಯ ಕೆ.ಎಂ. ಅಪ್ಪಣ್ಣ ಮಾತನಾಡಿ, ಉಪಲೋಕಾಯುಕ್ತರು ಪ್ರತಿ ಪಕ್ಷದ ವಾರ್ಡ್‌ಗಳ ಲೋಪ ನೋಡಿ ತರಾಟೆಗೆ ತೆಗೆದುಕೊಂಡಿದ್ದಾರೆ. 5 ಎಕರೆ ಜಾಗ ಸಾಲುವುದಿಲ್ಲ. ಮಡಿಕೇರಿ ಕಸವನ್ನು ಕುಶಾಲನಗರಕ್ಕೆ ಕಳುಹಿಸುವ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು.