ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆ ಮಾಡದಿರುವುದನ್ನು ಖಂಡಿಸಿ ಸೆ.14ರಂದು ಗಗನಚುಕ್ಕಿ ಜಲಪಾತೋತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ರೈತರ ಕಷ್ಟ ಕೇಳದೇ ಜಲಪಾತೋತ್ಸವ ನಡೆಸಲಾಗುತ್ತಿದೆ. ಕೆರೆಕಟ್ಟೆಗಳು ತುಂಬದಿದ್ದರೆ ಪ್ರತಿಭಟನೆ ಮಾಡುವುದು ಖಚಿತ ಅಂತ ಈ ಹಿಂದೆಯೇ ಹೇಳಿದ್ದೆ. ಅದರಂತೆ ಸಿಎಂ ಸಿದ್ದರಾಮಯ್ಯ ಬರುವ ದಿನ ಪ್ರತಿಭಟನೆ ನಡೆಸುತ್ತೇವೆ ಎಂದರು.
ಜನಪ್ರತಿನಿಧಿಗಳು ಜನ ಸಾಮಾನ್ಯರ ಕಷ್ಟವನ್ನು ಆಲಿಸಬೇಕು. ಅದನ್ನು ಬಿಟ್ಟು ಉತ್ಸವ ನಡೆಸುವುದು ಎಷ್ಟು ಸರಿ. ಸೆ.14ರಂದು ಕಪ್ಪುಬಟ್ಟೆ ಧರಿಸಿ ನಾವು ಪ್ರತಿಭಟನೆ ನಡೆಸುತ್ತಿವೆ. ನಮ್ಮ ಪ್ರತಿಭಟನೆ ಸಿದ್ದರಾಮಯ್ಯ, ನರೇಂದ್ರಸ್ವಾಮಿ ವಿರುದ್ಧವಲ್ಲ. ನಮ್ಮ ಸಮಸ್ಯೆಯನ್ನು ಮುಂದಿಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಮಳವಳ್ಳಿ ಬಗ್ಗೆ ಏನು ಗೊತ್ತು. ನೀರಿನ ವಿಚಾರವಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆದ ಪಾದಯಾತ್ರೆಯಲ್ಲಿ ದಾರಿ ಉದ್ದಕ್ಕೂ ಕೊನೆ ಭಾಗಕ್ಕೆ ನೀರು ಕೊಡಿ ಎಂದು ಒತ್ತಾಯ ಮಾಡಿದ್ದೇನೆ. ವ್ಯಂಗ್ಯವಾಗಿ ಬುದ್ಧರನ್ನು ವೋಲಿಕೆ ಮಾಡಿ ಮಾತನಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ರೈತರ ಬದುಕನ್ನು ಹಸನು ಮಾಡಿದ ನಂತರ ಯಾವ ಉತ್ಸವವನ್ನಾದರೂ ಮಾಡಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ರೈತರ ಬಗ್ಗೆ ಯೋಚನೆ ಮಾಡಬೇಕಿತ್ತು. ಆದರೆ, ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ನೆರವಿಗೆ ಬಾರದೇ ಸಂಭ್ರಮಾಚರಣೆ ಮಾಡುತ್ತಿದೆ ಎಂದರು.ರೈತರಿಗಾಗಿ ಹೋರಾಟ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಭಟನೆ ಬಗ್ಗೆ ಸಭೆ ನಡೆಸಿ ಯಾವ ಸ್ಥಳದಲ್ಲಿ ಪ್ರತಿಭಟನೆ ನಡೆಸಬೇಕೆಂಬುವುದರ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ನಂದಕುಮಾರ್, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ರವಿ, ಕೃಷ್ಣ, ಮುಖಂಡರಾದ ಹನುಮಂತು, ದೇವರಾಜು, ಪ್ರಶಾಂತ್, ನಟರಾಜು, ಪ್ರಕಾಶ್, ಕೃಷ್ಣ, ಕಾಂತರಾಜು, ಸತೀಶ್, ಪ್ರಭು,ಕೃಷ್ಣ, ಶಿವಮಾದಪ್ಪ ಸೇರಿದಂತೆ ಇತರರು ಇದ್ದರು.