ಕೊಡುಗೆಯ ಬುರುಡೆ ಇದ್ರೆ ತೋರಿಸಿ?: ಡಿಸಿಎಂ ಡಿ.ಕೆ.ಶಿವಕುಮಾರ್

KannadaprabhaNewsNetwork | Updated : Apr 21 2024, 11:03 AM IST

ಸಾರಾಂಶ

ನಮ್ಮ ಸರ್ಕಾರ ಕೇವಲ ಐದು ವರ್ಷವಲ್ಲ, ಮುಂದಿನ 10 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ. ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಕೊಟ್ಟಿರುವಂತಹ ಕೊಡುಗೆ ಏನು? ಕೊಡುಗೆಯ ಬುರುಡೆ ಇದ್ರೆ ತೋರಿಸಿ? 

 ಪಾಂಡವಪುರ :  ಮಂಡ್ಯ ಜಿಲ್ಲೆಯ ಜನತೆ ಸ್ವಾಭಿಮಾನಿಗಳು. ಇಲ್ಲಿಯವರೆಗೂ ಮಂಡ್ಯದವರೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಹೊರಗಿನ ಅಭ್ಯರ್ಥಿಗಳಿಗೆ ಮತ ನೀಡಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ತಾಲೂಕಿನ ರೈಲ್ವೆ ನಿಲ್ದಾಣದ ಬಳಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು)ಪರ ಮತಯಾಚನೆ ಮಾಡಿ, ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣ ಕ್ಷೇತ್ರ ಬಿಟ್ಟು ಇದೀಗ ಮಂಡ್ಯ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಿದ್ದಾರೆ. ಎಚ್ಡಿಕೆಗೆ ತಕ್ಕಪಾಠ ಕಲಿಸಿ ಎಂದು ಕರೆ ನೀಡಿದರು.

ನಮ್ಮ ಸರ್ಕಾರ ಕೇವಲ ಐದು ವರ್ಷವಲ್ಲ, ಮುಂದಿನ 10 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ. ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಕೊಟ್ಟಿರುವಂತಹ ಕೊಡುಗೆ ಏನು? ಕೊಡುಗೆಯು ಬುರುಡೆ ಇದ್ರೆ ತೋರಿಸಿ? ಎಂದು ಸವಾಲು ಹಾಕಿದರು.

ಮಂಡ್ಯದಿಂದ ಅಭ್ಯರ್ಥಿಯಾಗಲು ಹಲವರು ಮುಖಂಡರು ಆಕಾಂಕ್ಷಿತರಿದ್ದರು. ಆದರೆ, ಕುಮಾರಸ್ವಾಮಿ ಯಾರಿಗೂ ಅವಕಾಶ ನೀಡದೆ ಅವರೇ ಒಂದು ಸ್ಪರ್ಧಿಸಿದ್ದಾರೆ. ಮಂಡ್ಯಜಿಲ್ಲೆಯ ನೀರಾವರಿ ಅನುಕೂಲಕ್ಕಾಗಿ ನಾಲೆಗಳ ಆಧುನೀಕರಣ ಮಾಡುತ್ತಿದ್ದೇವೆ. ಕೃಷಿ ವಿವಿ ನೀಡಿದ್ದೇವೆ, ಹೊಸ ಕಾರ್ಖಾನೆ ಸ್ಥಾಪನೆ ಮಾಡುತ್ತಿದ್ದೇವೆ. ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು ಪ್ರಶ್ನಿಸಿದರು.

ಈ ವೇಳೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಎಂಪಿ ನರೇಂದ್ರಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಬಿ.ರೇವಣ್ಣ, ಎ.ಎಲ್.ಕೆಂಪೂಗೌಡ, ಎಚ್.ಕೃಷ್ಣೇಗೌಡ, ಕೆನ್ನಾಳು ನಾಗರಾಜು, ಕೆ.ಎಸ್.ದಯಾನಂದ್, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಕಾಂಗ್ರೆಸ್ ಸೇರ್ಪಡೆ

ಭಾರತೀನಗರ:ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ಉದಯ್, ಕಾಂಗ್ರೆಸ್‌ನ ತತ್ವ, ಸಿದ್ಧಾಂತಗಳನ್ನು ಮೆಚ್ಚಿ, ಸಾಮಾಜಿಕ ಸೇವೆ ಮೂಲಕ ಗುರುತಿಸಿಕೊಂಡಿರುವ ಸಿ.ಶಿವಲಿಂಗಯ್ಯ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದರು.ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಮಾತನಾಡಿ, ಕೋಮುವಾದಿಗಳು ಅಧಿಕಾರ ಹಿಡಿದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಅಂತಹ ಸರ್ಕಾರವನ್ನು ತೊಲಗಿಸಲು ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಪ್ರಸ್ತುತ ಕಾಂಗ್ರೆಸ್ ಬೆಂಬಲಿಸುವುದು ಅನಿವಾರ್ಯವೂ ಆಗಿದೆ. ಈ ಬಾರಿ ಕಾಂಗ್ರೆಸ್ ಬೆಂಬಲಿಸಿ ಸಂವಿಧಾನ ಉಳಿಸಿ ಎಂಬ ಘೋಷಣೆ ನಮ್ಮದಾಗಿದೆ ಎಂದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಿ. ಬಸವರಾಜು, ಮಾಜಿ ಸದಸ್ಯ ಎ.ಎಸ್. ರಾಜೀವ, ಮುಖಂಡ ಎಂ.ಸಿ. ಬಸವರಾಜು, ನಿವೃತ್ತ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ, ಮುಖಂಡರಾದ ಅಣ್ಣೂರು ಮಹದೇವಯ್ಯ, ವಸಂತಾ ವೆಂಕಟಾಚಲಯ್ಯ ಮಲ್ಲಿಗೆ ಮಹದೇವಮ್ಮ, ಹುರಗಲವಾಡಿ ರಾಮಯ್ಯ, ಜಾಣಪ್ಪ, ಕೆ. ಮಾದೇಗೌಡ, ಬನ್ನಹಳ್ಳಿ ಸುಂದರಮ್ಮ. ಮಾಲಯ್ಯ, ಕರಡಕೆರೆ ಶಿವಲಿಂಗಯ್ಯ, ಬಿದರಹೊಸಹಳ್ಳಿ ಚಿಕ್ಕಣ್ಣ, ಹೊನ್ನಲಗೆರೆ ನಾಗೇಶ, ಗೋಪನಹಳ್ಳಿ ಮುತ್ತಯ್ಯ, ಕಾಡುಕೊತ್ತನಹಳ್ಳಿ ರುದ್ರಕುಮಾರ, ಹುರಗಲವಾಡಿ ರಾಮಯ್ಯ, ಭುಜುವಳ್ಳಿ ಚನ್ನಯ್ಯ ಇದ್ದರು.

Share this article