ಕನ್ನಡಪ್ರಭ ವಾರ್ತೆ ಅಶೋಕ (ಗೋಕರ್ಣ)
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ಬುಧವಾರ ''''ಅನ್ನಬ್ರಹ್ಮ ಚಾತುರ್ಮಾಸ್ಯ'''' ಆರಂಭದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಶಂಕರರು ತೋರಿದ ದಾರಿಯಲ್ಲಿ ಧರ್ಮ ಪ್ರಸಾರ ಮಾಡುತ್ತಾ, ಸಮಾಜಕ್ಕೆ ಸರಿ-ತಪ್ಪುಗಳನ್ನು ಮಾರ್ಗದರ್ಶನ ಮಾಡುವುದು ಮಠದ ಕಾರ್ಯವಾಗಬೇಕು. ನಮ್ಮ ಮಠದ ಉದ್ದೇಶ ಹಾಗೂ ಈ ''''ಅನ್ನಬ್ರಹ್ಮ ಚಾತುರ್ಮಾಸ್ಯ''''ದ ಉದ್ದೇಶವೂ ಇದೇ ಆಗಿದೆ. ಜೀವನಕ್ಕೆ ಸರಿಯಾದ ದಾರಿಯನ್ನು ತೋರುವುದು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವುದು ಮಠದ ಕಾರ್ಯ ಎಂದು ''''ಅನ್ನಬ್ರಹ್ಮ ಚಾತುರ್ಮಾಸ್ಯ''''ದ ಉದ್ದೇಶವನ್ನು ತಿಳಿಸಿದರು.
ಕಳೆದ ವರ್ಷ ಮಾತು ಅಥವಾ ಭಾಷೆಗೆ ಸಂಬಂಧಿಸಿದ ‘ಸ್ವಭಾಷಾ ಚಾತುರ್ಮಾಸ್ಯ’ ಮಾಡಲಾಗಿತ್ತು ಹಾಗೂ ಈ ವರ್ಷ ತಿನ್ನುವ ಆಹಾರಕ್ಕೆ ಸಂಬಂಧಿಸಿದ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಆಚರಿಸಲಾಗುತ್ತಿದೆ. ಹೀಗೆ ಈ ವರ್ಷ ಹಾಗೂ ಕಳೆದ ವರ್ಷದ ಚಾತುರ್ಮಾಸ್ಯಗಳೆರಡೂ ನಾಲಿಗೆಗೆ ಸಂಬಂಧಿಸಿದ್ದಾಗಿದೆ. ನಾಲಿಗೆಗೆ ಸಂಬಂಧಿಸಿದ ತಪ್ಪುಗಳನ್ನು ತಿದ್ದುವ ಕಾರ್ಯ ಇದಾಗಿದೆ ಎಂದರು.ಇಂದು ಗೌಣವಾದ ವಿಚಾರಗಳು ಮುಖ್ಯವಾಗುತ್ತಿದೆ. ಮುಖ್ಯ ವಿಚಾರಗಳು ಗೌಣವಾಗುತ್ತಿದೆ. ಇದು ಈ ಕಾಲದ ದುರಂತ ಎಂದ ಶ್ರೀಗಳು, ಇಂದು ನಾವು ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೇ? ಆಹಾರವನ್ನು ಹೇಗೆ ತಯಾರಿಸಲಾಗಿದೆ? ಎಂಬ ಕುರಿತು ಆಲೋಚಿಸದೇ ಕೇವಲ ತುತ್ತಿನ ಚೀಲವನ್ನು ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಇಂದು ಆಹಾರದ ಕುರಿತಾಗಿ ಸಮರ್ಪಕವಾದ ಮಾಹಿತಿಯನ್ನು ಶಾಲೆಯಲ್ಲಾಗಲಿ, ವಿಶ್ವವಿದ್ಯಾಲಯಗಳಾಗಲಿ ತಿಳಿಸಿಕೊಡುತ್ತಿಲ್ಲ. ನಾವು ಏನನ್ನು ತಿನ್ನುತ್ತೇವೋ ಅದೇ ನಾವಾಗುತ್ತೇವೆ. ಹಾಗಾಗಿ ನಾವೇ ಆಹಾರದ ಕುರಿತಾದ ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿಸಲು ಮುಂದಾಗಿದ್ದೇವೆ ಎಂದರು. 33ನೇ ಚಾತುರ್ಮಾಸ್ಯ ವ್ರತವನ್ನು ವ್ಯಾಸಪೂಜೆ ಕೈಗೊಳ್ಳುವ ಮೂಲಕ ವಿಧ್ಯುಕ್ತವಾಗಿ ಆರಂಭಿಸಿದರು. ಶ್ರೀರಾಮಾದಿ ದೇವರ ಪೂಜೆಯನ್ನು ಮಾಡಿ, ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಋಷಿಗಳನ್ನು ಆವಾಹನೆಮಾಡಿ, ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು.