ಚನ್ನಮ್ಮ ನಿಧನಕ್ಕೆ ಜೆಡಿಎಸ್ ಕಾರ್ಯಕರ್ತರಿಂದ ನುಡಿನಮನ

KannadaprabhaNewsNetwork |  
Published : Jul 30, 2026, 02:00 AM IST
28ಕೆಎಂಎನ್ ಡಿ15 | Kannada Prabha

ಸಾರಾಂಶ

ಚನ್ನಮ್ಮ ಅವರು ಕುಟುಂಬದ ಸದಸ್ಯರಲ್ಲಿ ಸಂಸ್ಕಾರ, ಶಿಸ್ತು ಹಾಗೂ ಸೇವಾಭಾವವನ್ನು ಬೆಳೆಸಿದ ಆದರ್ಶ ಮಾತೃಮೂರ್ತಿಯಾಗಿದ್ದರು. ಅವರ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೆ ಪ್ರೇರಣೆ ಹಾಗೂ ಮುಂದಿನ ಪೀಳಿಗೆಗೆ ಆದರ್ಶವಾಗಿವೆ ಎಂದು ಸಂತಾಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ತಾಲೂಕಿನ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ನುಡಿನಮನ ಸಲ್ಲಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್.ಟಿ.ಮಂಜು ನೇತೃತ್ವದ ಕಾರ್ಯಕ್ರಮದಲ್ಲಿ ಚನ್ನಮ್ಮರ ಭಾವಚಿತ್ರಕ್ಕೆ ತಾಲೂಕಿನ ಪಕ್ಷದ ಮುಖಂಡರು, ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಚನ್ನಮ್ಮ ಅವರು ಕೇವಲ ದೇವೇಗೌಡರ ಪತ್ನಿಯಾಗಿರದೆ ಕುಟುಂಬದ ಆಧಾರಸ್ತಂಭ, ತ್ಯಾಗಮಯಿ ತಾಯಿ ಹಾಗೂ ಸರಳತೆಯ ಪ್ರತೀಕವಾಗಿದ್ದರು. ಇವರ ದಾಂಪತ್ಯ ಇಂದಿನ ಯುವ ಪೀಳಿಗೆಯ ದಂಪತಿಗಳಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ದೇವೇಗೌಡರು ಗ್ರಾಪಂನಿಂದ ದೇಶದ ಪ್ರಧಾನಮಂತ್ರಿ ಹುದ್ದೆಯವರೆಗೆ ಏರಿದ ಸುದೀರ್ಘ ರಾಜಕೀಯ ಪಯಣದಲ್ಲಿ ಚನ್ನಮ್ಮ ಅವರು ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೆ ಅವರ ಬೆನ್ನೆಲುಬಾಗಿ ನಿಂತಿದ್ದರು. ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ದೇವೇಗೌಡರ ಸಾರ್ವಜನಿಕ ಸೇವೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದರು ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಜೀವನಶೈಲಿ, ಕೃಷಿಯೊಂದಿಗಿನ ನಂಟು, ಸರಳ ಆಹಾರ- ವಿಹಾರ, ಧಾರ್ಮಿಕ ನಂಬಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಚನ್ನಮ್ಮ ಅವರು ಅಧಿಕಾರ ಮತ್ತು ವೈಭವದಿಂದ ದೂರವಿದ್ದು, ಸಾಮಾನ್ಯ ಜನರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಬಡವರು, ರೈತರು ಹಾಗೂ ನೆರವು ಕೋರಿ ಬಂದವರನ್ನು ಆತ್ಮೀಯತೆಯಿಂದ ಸ್ವಾಗತಿಸಿ ಸಾಧ್ಯವಾದ ನೆರವು ನೀಡುತ್ತಿದ್ದ ಅವರ ಗುಣ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.

ಚನ್ನಮ್ಮ ಅವರು ಕುಟುಂಬದ ಸದಸ್ಯರಲ್ಲಿ ಸಂಸ್ಕಾರ, ಶಿಸ್ತು ಹಾಗೂ ಸೇವಾಭಾವವನ್ನು ಬೆಳೆಸಿದ ಆದರ್ಶ ಮಾತೃಮೂರ್ತಿಯಾಗಿದ್ದರು. ಅವರ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೆ ಪ್ರೇರಣೆ ಹಾಗೂ ಮುಂದಿನ ಪೀಳಿಗೆಗೆ ಆದರ್ಶವಾಗಿವೆ ಎಂದು ಸಂತಾಪ ಸೂಚಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಕಾರ್ಯಾಧ್ಯಕ್ಷ ಮೆಣಸ ಮಹದೇವೇಗೌಡ, ಜೆಡಿಎಸ್ ಪಕ್ಷದ ರಾಜ್ಯ ಪರಿಷತ್ ಸದಸ್ಯ ಎ.ಆರ್.ರಘು, ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ಮಹದೇವೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ನಿರ್ದೇಶಕರಾದ ಶೀಳನೆರೆ ಮೋಹನ್, ಎಚ್.ಟಿ.ಲೋಕೇಶ್, ಕಿಕ್ಕೇರಿ ಮಧು, ಕೆ.ಬಿ.ನಾಗೇಶ್, ಮಂಜುನಾಥ, ಜೆಡಿಎಸ್ ಘಟಕದ ರೈತಮೋರ್ಚಾ ತಾಲೂಕು ಅಧ್ಯಕ್ಷ ಹುಲ್ಲೇಗೌಡ, ಉಪಾಧ್ಯಕ್ಷ ಬೇಲದಕೆರೆ ನಂಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಚಂದ್ರನ್, ಮುಖಂಡರಾದ ತೋಂಟಪ್ಪಶೆಟ್ಟಿ, ಕಟ್ಟೆಕ್ಯಾತನಹಳ್ಳಿ ಚಂದ್ರೇಗೌಡ, ಕೊರಟಿಕೆರೆ ದಿನೇಶ್, ಪುರಸಭಾ ಮಾಜಿ ಸದಸ್ಯ ಹೇಮಂತ್ ಕುಮಾರ್, ಶೀಳನೆರೆ ದಿನೇಶ್, ಹೋಬಳಿ ಅಧ್ಯಕ್ಷರುಗಳಾದ ಸಂತೆಬಾಚಹಳ್ಳಿ ರವಿ, ಬಸವಲಿಂಗಪ್ಪ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಚನ್ನಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವಸ್ಥಾನಗಳ ಹುಂಡಿಗೆ 360 ಡಿಗ್ರಿ ಸಿಸಿಟಿವಿ ಭದ್ರತೆ: ಎಡಿಸಿ ಝುಬೇರ್ ಸೂಚನೆ
ಶ್ರದ್ಧಾ, ಭಕ್ತಿಯಿಂದ ನಡೆದ ಗುರುಪೂರ್ಣಿಮೆ