ಹಾನಗಲ್ಲ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳ ಎಲ್ಲ ೫ ಬುಧವಾರಗಳಂದು ಶ್ರಮದಾನಕ್ಕೆ ಶಾಸಕ ಶ್ರೀನಿವಾಸ ಮಾನೆ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ೨ನೇ ಬುಧವಾರ ತಾಲೂಕಿನ ಎಲ್ಲ ೪೨ ಗ್ರಾಪಂ ಹಾಗೂ ಸ್ಥಳೀಯ ಪುರಸಭೆ ವ್ಯಾಪ್ತಿಯ ೫ ಸ್ಥಳಗಳು ಸೇರಿದಂತೆ ಒಟ್ಟು ೪೭ ಸ್ಥಳಗಳಲ್ಲಿ ಏಕಕಾಲಕ್ಕೆ ಶ್ರಮದಾನ ಕೈಗೊಳ್ಳಲಾಯಿತು.
ನರೇಗಲ್ ಜಿಪಂ ವ್ಯಾಪ್ತಿಯ ಆಲದಕಟ್ಟಿಯ ಗ್ರಾಪಂ ಆವರಣ, ಮುಖ್ಯ ರಸ್ತೆ, ನರೇಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಂಬಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಶ್ರಮದಾನದಲ್ಲಿ ಶಾಸಕ ಶ್ರೀನಿವಾಸ ಮಾನೆ, ಜಿಪಂ ಸಿಇಒ ಅಕ್ಷಯ್ ಶ್ರೀಧರ ಪಾಲ್ಗೊಂಡಿದ್ದರು. ಕಾಡಶೆಟ್ಟಿಹಳ್ಳಿ ಗ್ರಾಮದ ಮುಖ್ಯರಸ್ತೆ, ಬೆಳಗಾಲಪೇಟೆಯ ಅಂಗನವಾಡಿ ಕೇಂದ್ರ, ಕೂಡಲದ ಅಂಗನವಾಡಿ ಕೇಂದ್ರ, ವಳಗೇರಿಯ ಮುಖ್ಯರಸ್ತೆಯಲ್ಲಿ ನಡೆದ ಶ್ರಮದಾನದಲ್ಲಿ ಶಾಸಕ ಶ್ರೀನಿವಾಸ ಮಾನೆ ಪಾಲ್ಗೊಂಡಿದ್ದರು.
ಅಕ್ಕಿಆಲೂರಿನ ಬಸ್ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಜಲಾಗಾರ, ಮುಖ್ಯರಸ್ತೆ, ಅಂಬೇಡ್ಕರ್ ಭವನ, ಕಲ್ಲಾಪುರ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಯತ್ತಿನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ್, ತಹಸೀಲ್ದಾರ್ ರೇಣುಕಾ ಎಸ್. ಶ್ರಮದಾನ ಕೈಗೊಂಡರು.ಈ ಸಂದರ್ಭದಲ್ಲಿ ಶಾಸಕ ಮಾನೆ ಮಾತನಾಡಿ, ಇಡೀ ರಾಜ್ಯಕ್ಕೆ ಮಾದರಿ ಎನಿಸುವಂಥ ರೀತಿಯಲ್ಲಿ ಹಾನಗಲ್ಲ ತಾಲೂಕಿನಲ್ಲಿ ಗಾಂಧಿ ಜಯಂತಿ ಆಚರಿಸಲಾಗುತ್ತಿದೆ. ಅಧಿಕಾರಿಗಳು, ಸರ್ಕಾರಿ ನೌಕರರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಜನಪ್ರತಿನಿಧಿಗಳು, ಒಟ್ಟಾರೆ ಸಮುದಾಯವನ್ನು ಒಳಗೊಂಡು ಶ್ರಮದಾನ ಕೈಗೊಳ್ಳಲಾಗುತ್ತಿದೆ. ಅಕ್ಟೋಬರ್ ಮೊದಲ ಬುಧವಾರದಂತೆ ೨ನೇ ಬುಧವಾರ ಸಹ ಶ್ರಮದಾನ ಎಲ್ಲ ಕಡೆಗಳಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ೩ ಬುಧವಾರಗಳಂದೂ ಶ್ರಮದಾನ ನಡೆಯಲಿದೆ. ಪ್ರತಿ ಗ್ರಾಪಂಗಳಿಗೂ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಮೇಲುಸ್ತುವಾರಿಯ ಜವಾಬ್ದಾರಿ ವಹಿಸಲಾಗಿದೆ. ಈ ಸ್ವಚ್ಛತಾ ಮಾಸಾಚರಣೆಗೆ ಪ್ರತಿಯೊಬ್ಬರೂ ಕೈ ಜೋಡಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.ಉತ್ತಮ ಪ್ರತಿಕ್ರಿಯೆ: ಹಾನಗಲ್ ತಾಲೂಕಿನಲ್ಲಿ ನಡೆದಿರುವ ಸ್ವಚ್ಛತಾ ಮಾಸಾಚರಣೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ೨ ಬುಧವಾರಗಳಂದು ನಡೆದ ಶ್ರಮದಾನದಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ. ಜಿಲ್ಲಾಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳೂ ಶ್ರಮದಾನದಲ್ಲಿ ಭಾಗವಹಿಸುತ್ತಿದ್ದು, ಇನ್ನುಳಿದ ೩ ಬುಧವಾರಗಳಂದೂ ಶ್ರಮದಾನ ನಡೆಯಲಿದೆ.