ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದ ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ಶ್ರೀನರಸಿಂಹಸ್ವಾಮಿ ದೇವರನ್ನು ಹಲವು ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಪೂಜೆಗೆ ಆಗಮಿಸಿದ ಭಕ್ತರಿಗೆ ದೇವಾಲಯದ ಸಮಿತಿಯಿಂದ ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು.
ಸಾತನೂರು ಬೆಟ್ಟ ಎಂದೇ ಹೆಸರಾಗಿರುವ ಇಲ್ಲಿ ಪ್ರತಿ ಶ್ರಾವಣ ಶನಿವಾರದಂದು ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಭಕ್ತರ ದಂಡು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಅನುಕೂಲವಾಗುವಂತೆ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಪಿ.ಮಹೇಶ್ ಅನುಕೂಲತೆಗಳನ್ನು ಮಾಡಿಕೊಟ್ಟಿದ್ದರು. ಎಸ್.ಪಿ.ಸತೀಶ್, ಬೋರೇಗೌಡ, ಬಾಲರಾಜು, ಸುರೇಶ್ ಸೇರಿದಂತೆ ಇತರರು ಉಸ್ತುವಾರಿ ವಹಿಸಿದ್ದರು.ನಗರದ ಪ್ರಮುಖ ದೇವಾಲಯಗಳಲ್ಲೊಂದಾದ ಶ್ರೀಲಕ್ಷ್ಮೀ ಜನಾರ್ದನಸ್ವಾಮಿ ದೇವಾಲಯ, ಶ್ರೀನಿವಾಸ ದೇವಾಲಯ, ಹೊಸಹಳ್ಳಿ ಬಡಾವಣೆಯ ಶ್ರೀನಿವಾಸ ದೇವಾಲಯ, ಬೋವಿ ಕಾಲೋನಿಯ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯ, ನಗರದ ಮೈಸೂರು-ಬೆಂಗಳೂರು ಹೆದ್ದಾರಿ ಕಲ್ಲಹಳ್ಳಿಯ ಶ್ರೀಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರ ದಂಡು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.
ಕಿಕ್ಕೇರಿ
ಮಕ್ಕಳಿಗೆ ಸಂತಸ ಕೊಡುವಲ್ಲಿ ಶ್ರಾವಣ ಮಾಸ ಒಂದಾಗಿದೆ. ಪುಟಾಣಿಗಳು ಮನೆ ಮನೆ, ಅಂಗಡಿಗಳಿಗೆ ಲಗ್ಗೆ ಇಟ್ಟು ಸಿಹಿ ತಿನಿಸು ಪಡೆದು ಖುಷಿಪಟ್ಟರು. ವಿಷ್ಣುವಿನ ಸ್ಮರಣೆಗಾಗಿ ಉಪಧಾನದ ಮೂಲಕ ಗೋವಿಂದ ಸ್ಮರಣೆ ಮಾಡಲು ಕೈಯಲ್ಲಿ ದಪ್ಪ, ಸಣ್ಣ ಚೊಂಬು, ಲೋಟಗಳಿಗೆ ಗೋವಿಂದನ ನಾಮವನ್ನು ಬಳಿದು ಶೃಂಗರಿಸಿದ್ದರು.
ಗೋವಿಂದ ಎಂದು ಕೂಗುತ್ತಾ ಅಂಗಡಿಗಳಲ್ಲಿ ಕಡಲೆಪುರಿ, ಬತಾಸ್, ಪೆಪ್ಪರ್‌ಮೆಂಟ್, ಬಿಸ್ಕತ್, ಬಾಳೆಹಣ್ಣು ಪಡೆದರು. ಬೇಕರಿಗಳಿಗೆ ನುಗ್ಗಿದ ಮಕ್ಕಳನ್ನು ಸಂತಸದಿಂದ ಅಂಗಡಿ ಮಾಲೀಕರು ಮಕ್ಕಳಿಗೆ ಬೇಕರಿ ತಿನಿಸು ನೀಡಿದರು. ಮನೆಗಳಿಗೆ ನುಗ್ಗಿ ಸೌತೆಕಾಯಿ, ರಾಗಿ, ಅಕ್ಕಿ ಹಿಟ್ಟನ್ನು ಬೂವನಾಸಿಯಂತಹ ಚೊಂಬುಗಳಿಗೆ ತುಂಬಿಸಿಕೊಂಡರು.