- ಅಂಗಳದೆಡೆಗೆ ಮಂಗಳ ನುಡಿ-ನಡಿಗೆ ಅಭಿಯಾನ ಆರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಾಮಾಜಿಕ, ಧಾರ್ಮಿಕ ಬದಲಾವಣೆಗೆ ಶ್ರಾವಣ ಪ್ರೇರಕ ಸಹಕಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗ ದೊಂದಿಗೆ ಜುಲೈ26 ರಿಂದ ಆಗಸ್ಟ್ 24 ರವರೆಗೆ ಆಯೋಜಿಸಿರುವ ’ಅಂಗಳದೆಡೆಗೆ ಮಂಗಳ ನುಡಿ-ನಡಿಗೆ’ ’ಶ್ರಾವಣ ಮಾಸದ ಪ್ರವಚನ ಮಾಲಿಕೆ’ಯನ್ನು ಕಲ್ಯಾಣನಗರದ ಶಾಸಕರ ಮನೆಯಂಗಳದಲ್ಲಿ ಉದ್ಘಾಟಿಸಿ ಮಾತನಾಡಿದರು.ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆ ಬಗ್ಗೆ ಅರಿವು ಮೂಡಿಸಲು ಶ್ರಾವಣಮಾಸ ಅತ್ಯಂತ ಸೂಕ್ತ. ಶ್ರಾವಣವೇ ಅಪ್ಯಾಯಮಾನ. ನಿಸರ್ಗ ಸಂಭ್ರಮಿಸುವ ಶ್ರಾವಣದಲ್ಲಿ ಘಂಟಾನಾದ, ಪುರಾಣ ಪ್ರವಚನ, ಶುಭ ನುಡಿಗಳ ಸಿಂಚನ ಪ್ರಮುಖವಾಗಿರುತ್ತದೆ. ಶ್ರಾವಣ ಶುಭ ಕಾರ್ಯಗಳಿಗೆ ಪ್ರಶಸ್ತವೆಂಬ ಮಾತಿದೆ. ಹಬ್ಬಗಳ ಮೆರವಣಿಗೆ ಶ್ರಾವಣ ಎಂದರು. ನಾವೆಲ್ಲರೂ ನೆಮ್ಮದಿ ಶಾಂತಿಯ ವಾತಾವರಣದಲ್ಲಿರಲು ದೇಶದ ಸುಭೀಕ್ಷೆ ಪ್ರಮುಖ. ನಂತರ ಧಾರ್ಮಿಕ ಆಚರಣೆಗಳು ನಮ್ಮೊಂದಿಗೆ ಬೆಸೆದುಕೊಂಡಿದೆ. ಭಾರತ ಹಲವು ಧರ್ಮ, ಸಂಸ್ಕೃತಿ, ಸಂಸ್ಕಾರ ವಿಚಾರಗಳನ್ನೊಳಗೊಂಡ ಬಹುತ್ವದ ವಿಶೇಷತೆ ಹೊಂದಿದೆ. ಸಾಂಸ್ಕೃತಿಕ ಚಿಂತಕ ಚಟ್ನಳ್ಳಿ ಮಹೇಶ್ ತಂಡ ಶ್ರಾವಣಮಾಸದಲ್ಲಿ ಒಳ್ಳೆಯ ಮಾತುಗಳನ್ನು ಮನೆ-ಮನಕ್ಕೆ ಮುಟ್ಟಿಸುವ ಕೆಲಸ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಜಾತಿ, ಮತ, ಪಕ್ಷ ಯಾವುದೇ ಬೇಧವಿಲ್ಲದೆ ಸಹೃದಯರ ಮನೆಯಂಗಳದಲ್ಲಿ ಚಿಕ್ಕ ಚೊಕ್ಕ ಕಾರ್‍ಯಕ್ರಮವನ್ನು ಶ್ರಾವಣಮಾಸ ಪರ್ಯಂತ ಹಮ್ಮಿಕೊಂಡಿರುವುದು ಮಾದರಿ ಸಂಗತಿ ಎಂದು ಹೇಳಿದರು. ’ಶ್ರಾವಣ ಶ್ರವಣ’ ಕುರಿತಂತೆ ಪ್ರವಚನ ನೀಡಿದ ಸಾಹಿತಿ ವಾಗ್ಮಿ ಚಟ್ನಳ್ಳಿ ಮಹೇಶ್, ಮಾತಿಗೆ ಸಮಾಜ ಪರಿವರ್ತಿಸುವ ಅಪಾರ ಶಕ್ತಿ ಇದೆ. ನಮ್ಮ ಹಿರಿಯರ ಅನುಭವಗಳನ್ನು ಮೆಲುಕು ಹಾಕಿದರೆ ಅದೊಂದು ದೊಡ್ಡ ಶಬ್ದಕೋಶವಾಗುತ್ತದೆ. ಇಂದು ಆಧುಕತೆ ಭರಾಟೆಯಲ್ಲಿ ಮನಸ್ಸುಗಳು ದೂರವಾಗುತ್ತಿವೆ. ಮನಸ್ಸುಗಳನ್ನು ಹತ್ತಿರಕ್ಕೆ ತರುವ, ಮನಸ್ಸನ್ನು ಕಟ್ಟುವ ಕಾರ್‍ಯ ಇಂದಿನ ತುರ್ತು ಅಗತ್ಯ. ನಿಸರ್ಗದಲ್ಲೆ ಸಾಮರಸ್ಯದ ಸಂದೇಶವಿದೆ. ಅದನ್ನು ಮೆಲುಕು ಹಾಕುವ ಪುಟ್ಟ ಪ್ರಯತ್ನ ಈ ಅಭಿಯಾನ ಎಂದರು.
ಸಾನಿಧ್ಯವಹಿಸಿದ್ದ ಬಸವತತ್ತ್ವ ಪೀಠದ ಅಧ್ಯಕ್ಷ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಜ ವಾತಾವರಣದಲ್ಲಿ ಮಕ್ಕಳು ನೋಡಿ, ಆಡಿ, ತುಂಬು ಕುಟುಂಬದಲ್ಲಿ ಬೆಳೆಯಬೇಕು. ಸಹಜವಾಗಿರುವುದನ್ನು ಬಿಟ್ಟು ಕೃತಕತೆಯತ್ತ ಮುಖ ಮಾಡಿರುವುದು ದುರ್ದೈವದ ಸಂಗತಿ. ಜನರ ಒಡನಾಟ ಕಡಿಮೆ ಮಾಡಿ ಆಹಾರ, ಮಾತು, ಬಟ್ಟೆ ಬದುಕಿನಲ್ಲಿ ಬೇರೆಯದನ್ನೆ ಅನುಕರಿಸುವುದರಿಂದ ಮೌಲ್ಯಗಳು ಮರೆ ಯಾಗುತ್ತಿವೆ ಎಂದು ನುಡಿದರು.ನಮ್ಮ ಪರಂಪರೆಯಲ್ಲಿ ಬಂದಿರುವ ಆಚಾರ ವಿಚಾರಗಳನ್ನು ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಶ್ರಾವಣ ಮಾಸದಲ್ಲಿ ಶ್ರವಣ ಮುಖ್ಯ. ರೈತಾಪಿ ವರ್ಗ ದೇಶದಲ್ಲಿ ಬಹುಸಂಖ್ಯಾತರಾಗಿದ್ದು ಅವರು ಆಷಾಢ ಮಾಸದಲ್ಲಿ ಬಿಡುವಿಲ್ಲದೆ ಭೂಮಿ ಕೆಲಸದಲ್ಲಿ ತೊಡಗಿಸಿಕೊಂಡ ಕಾಯಕ ಜೀವಿಗಳು. ಶ್ರಾವಣದಲ್ಲಿ ರೈತರಿಗೆ ಸ್ವಲ್ಪ ಬಿಡುವಿದ್ದು ಗುರು, ಲಿಂಗ, ಜಂಗಮ ಸೇವೆಯ ಜೊತೆಗೆ ಸಾಹಿತ್ಯದ ಅಭಿರುಚಿ ಅಭಿವ್ಯಕ್ತಿಗೆ ಸೂಕ್ತ ಸಂದರ್ಭ. ಬದುಕಿನ ಏರಿಳಿತಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಶ್ರಾವಣ ಕಾರ್‍ಯಕ್ರಮ ತಂದು ಕೊಡಲಿ ಎಂದರು.
ಬೇಲೂರಿನ ಚಂದನ್ ಶ್ರಾವಣ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಪದೋನ್ನತಿ ಪಡೆದ ಪೌರಾಯುಕ್ತ ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಎ.ಎಸ್.ಎಸ್.ಆರಾಧ್ಯ ಮತ್ತು ಸುಮಿತ್ರಾ ಶಾಸ್ತ್ರಿ ಅಭಿಪ್ರಾಯ ಹಂಚಿಕೊಂಡರು.ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ ಭಾರ್ಗವ ಪುರಿ ಪ್ರಾಸ್ತಾವಿಸಿ, ಶಿಕ್ಷಕ ಪರಮೇಶ್ವರಪ್ಪ ನಿರೂಪಿಸಿದರು. ಪ್ರಾಯೋಜಕ ದೇವಿರಪ್ಪ ಅವರನ್ನು ಗೌರವಿಸಲಾಯಿತು.27 ಕೆಸಿಕೆಎಂ 1ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಶ್ರಾವಣ ಮಾಸದ ಪ್ರವಚನ ಮಾಲಿಕೆಯನ್ನು ಉದ್ಘಾಟಿಸಿದರು. ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಚಟ್ನಳ್ಳಿ ಮಹೇಶ್, ಬಿ.ಸಿ. ಬಸವರಾಜು, ಪ್ರಭುಲಿಂಗಶಾಸ್ತ್ರೀ ಇದ್ದರು.