ಭಕ್ತಿ ಮಾರ್ಗದಿಂದ ಜೀವನ್ಮುಕ್ತಿ ಸಾಧ್ಯ

KannadaprabhaNewsNetwork |  
Published : Sep 03, 2024, 01:44 AM ISTUpdated : Sep 03, 2024, 01:45 AM IST
50 | Kannada Prabha

ಸಾರಾಂಶ

ಮಾನವನಿಗೆ ಸಕಲ ಸೌಕರ್ಯಗಳಿದ್ದರೂ ಅವನ ಚಂಚಲ ಮನಸ್ಸು ಹಾಗೂ ಆಸೆಗಳಿಂದ ಸಂತೃಪ್ತಿ ಹೊಂದುವುದಿಲ್ಲ

ಕನ್ನಡಪ್ರಭ ವಾರ್ತೆ ಸುತ್ತೂರು

ಭಕ್ತಿ ಮಾರ್ಗದಿಂದ ಜೀವನ್ಮುಕ್ತಿ ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಭಾಗೀಯ ಕಾರ್ಯದರ್ಶಿ ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕ ಡಾ. ಪಾಂಡುರಂಗ ತಿಳಿಸಿದರು.

ಶ್ರೀ ಸುತ್ತೂರು ಕ್ಷೇತ್ರದಲ್ಲಿ ಶ್ರಾವಣ ಮಾಸದಾದ್ಯಂತ ಜರುಗಿದ ಶ್ರಾವಣಮಾಸ ಪೂಜಾನುಷ್ಠಾನ ಮತ್ತು ಪ್ರವಚನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರಾವಣವು ಅತ್ಯಂತ ಶ್ರೇಷ್ಠ ಮಾಸ. ನಮ್ಮ ಪರಂಪರೆಯಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾಭ್ಯಾಸವನ್ನು ಈ ಮಾಸದಲ್ಲೇ ಆರಂಭಿಸುತ್ತಿದ್ದರು ಎಂದರು.

ಸದ್ಗುರುಗಳ ವಾಣಿಯನ್ನು ಶ್ರವಣ ಮಾಡಿ, ಭಕ್ತಿಮಾರ್ಗದಲ್ಲಿ ಜೀವನವನ್ನು ನಡೆಸಿ, ವಿದ್ಯೆಯ ಜೊತೆಗೆ ಉತ್ತಮ ಸದ್ಗುಣ ಮೌಲ್ಯಗಳನ್ನು ರೂಪಿಸಿಕೊಳ್ಳಲು ಇಂಥಹ ಪ್ರವಚನ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಜಗತ್ತಿನಲ್ಲಿ ವಿವಿಧ ಜೀವಿಗಳು ಕೇವಲ ಆಹಾರದಿಂದ ಸಂತೃಪ್ತಿ ಹೊಂದುತ್ತವೆ. ಆದರೆ, ಮಾನವನಿಗೆ ಸಕಲ ಸೌಕರ್ಯಗಳಿದ್ದರೂ ಅವನ ಚಂಚಲ ಮನಸ್ಸು ಹಾಗೂ ಆಸೆಗಳಿಂದ ಸಂತೃಪ್ತಿ ಹೊಂದುವುದಿಲ್ಲ. ಸದ್ಗುರುಗಳ ವಾಣಿಯನ್ನು ಆಲಿಸಿ, ನಮ್ಮ ಜೀವನದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು, ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಹೇಳಿದರು.

ಸಮಾರೋಪ ಭಾಷಣ ಮಾಡಿದ ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಜಿ.ಎಸ್. ರಘು ಅವರು, ಶ್ರಾವಣ ಮಾಸವು ವರ್ಷ ಋತುವಿನ ಮೊದಲ ತಿಂಗಳಾಗಿದ್ದು, ಯತಿಗಳು ಚತುರ್ಮಾಸ ವ್ರತವನ್ನು ಈ ಮಾಸದಲ್ಲಿ ಪ್ರಾರಂಭಿಸುತ್ತಿದ್ದರು. ಆಧ್ಯಾತ್ಮಿಕ ವಿಚಾರಗಳನ್ನು ಶ್ರವಣ ಹಾಗೂ ಮನನ ಮಾಡಿ ಇತರರಿಗೆ ಹಂಚಬೇಕು. ಈ ನಿಟ್ಟಿನಲ್ಲಿ ಸುತ್ತೂರು ಶ್ರೀಮಠವು ಸಮಾಜಕ್ಕೆ ಭಕ್ತಿಮಾರ್ಗವನ್ನು ತೋರಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದರು.

ಮುಡುಕನಪುರದ ಹಲವಾರ ಮಠದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸತ್ಯದ ಸಾಧನೆ ಶಿವತತ್ತ್ವದ ಅಧ್ಯಯನದಿಂದ ಸಾಧ್ಯ. ಮಕ್ಕಳಲ್ಲಿ ಸಾಮಾಜಿಕ, ತಾತ್ತ್ವಿಕ ಚಿಂತನೆಗಳನ್ನು ಬೆಳೆಸುವಲ್ಲಿ ಹಾಗೂ ಅಂತರ್ಗತ ಸಾಧನೆಯನ್ನು ಮಾಡುವಲ್ಲಿ ಪ್ರವಚನ ಕಾರ್ಯಕ್ರಮವು ಸಹಕಾರಿಯಾಗಿದೆ ಎಂದು ಹೇಳಿದರು.

ಶ್ರಾವಣ ಮಾಸದ ಪೂಜಾನುಷ್ಠಾನದಲ್ಲಿ ಪಾಲ್ಗೊಂಡಿದ್ದ ಶಿರಮಳ್ಳಿ ಮಠದ ಶ್ರೀ ಇಮ್ಮಡಿ ಮುರುಘೀ ಸ್ವಾಮೀಜಿ ಮಾತನಾಡಿ, ಲಕ್ಕಣ್ಣ ದಂಡೇಶನ ವೀರಶೈವ ವಿಶ್ವಕೋಶದಂತಿರುವ ಶಿವತತ್ತ್ವ ಚಿಂತಾಮಣಿಯನ್ನು ಅರಿತುಕೊಳ್ಳಲು ಹಾಗೂ ಅರ್ಥೈಸಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ. ಮಂಜುನಾಥ್‌, ಎಸ್. ಶಿವಕುಮಾರಸ್ವಾಮಿ ಭಾಗವಹಿಸಿದ್ದರು.

ಲಕ್ಕಣ್ಣ ದಂಡೇಶ ವಿರಚಿತ ಶಿವತತ್ತ್ವ ಚಿಂತಾಮಣಿ ಪ್ರವಚನವನ್ನು ಜೆಎಸ್‌ಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಚ್.ಬಿ. ದೇವಣ್ಣ ನಡೆಸಿಕೊಟ್ಟರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಸ್. ಸಿದ್ಧಲಿಂಗಸ್ವಾಮಿ ಕಾವ್ಯ ವಾಚನ ಮಾಡಿದರು. ಪ್ರವಚನವನ್ನು ಆಲಿಸಿ ಉತ್ತಮ ಪ್ರಬಂಧ ರಚಿಸಿದ ಶ್ರೋತೃಗಳು ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಿಕ್ಷಕರಾದ ಎಚ್.ಎಂ. ಸವಿತಾ ಸ್ವಾಗತಿಸಿದರು. ಸೌಜನ್ಯ ವಂದಿಸಿದರು. ಜಿ.ಎಸ್. ಜಗದಾಂಬಿಕಾ ನಿರೂಪಿಸಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ