ನಾಡಹಬ್ಬದಂತೆ ಶ್ರೀ ಚಾಮುಂಡೇಶ್ವರಿ ಕರಗೋತ್ಸವ: ಇಕ್ಬಾಲ್‌ ಹುಸೇನ್‌

KannadaprabhaNewsNetwork | Published : Jul 20, 2024 12:52 AM

ಸಾರಾಂಶ

ಈ ನಾಡಹಬ್ಬಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರಿಗೆ ಸಾಂಸ್ಕೃತಿಕ ರಸದೌತಣ ನೀಡುವ ಉದ್ದೇಶದಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ಚಲನಚಿತ್ರ ನಟ ನಟಿಯರು, ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೇದಿಕೆಯ ಆಕರ್ಷಣೆಯಾಗಿ ಚಲನಚಿತ್ರ ನಟರಾದ ಡಾಲಿ‌ ಧನಂಜಯ್ಯ, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಧ್ರುವಸರ್ಜಾ ಆಗಮಿಸಲಿದ್ದು, ಪ್ರಸಿದ್ದ ಹಾಡುಗಾರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರು ರಸಮಂಜರಿ ನಡೆಸಿಕೊಡುವರು. ಅನುಶ್ರೀ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಈ ಬಾರಿ ನಗರದಲ್ಲಿ ನಾಡಹಬ್ಬದಂತೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಜುಲೈ 23ರಂದು ಆಚರಿಸಲಿರುವ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸುವ ಚಾಮುಂಡಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಭೂಮಿ‌ಪೂಜೆ ನೆರವೇರಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ರಾಮನಗರದಲ್ಲಿ ಸರ್ವ ಧರ್ಮ‌ ಸಂದೇಶ ಸಾರುವ ಐತಿಹಾಸಿಕ ಕರಗ ಮಹೋತ್ಸವ ಆಚರಿಸುವ ಮೂಲಕ ರಾಮನಗರದ ಹಿರಿಮೆಯನ್ನು ಎಲ್ಲೆಡೆ ಪಸರಿಸಿದೆ. ಮೈಸೂರಿಗೆ ದಸರಾ ಹಬ್ಬವಿದ್ದಂತೆ, ರಾಮನಗರಕ್ಕೆ ಚಾಮುಂಡೇಶ್ವರಿ ಅಮ್ಮನವರ ಕರಗ ಹೆಚ್ಚು ಪ್ರಸಿದ್ಧಿಯಾಗಿದೆ. ಭಕ್ತರ ಸಂರಕ್ಷಣಾರ್ಥ ನಗರದಲ್ಲಿ ನೆಲೆಸಿರುವ ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಸೇರಿದಂತೆ ಅಷ್ಟ ನಾಡದೇವತೆಗಳ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದರು.

ಈ ನಾಡಹಬ್ಬಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರಿಗೆ ಸಾಂಸ್ಕೃತಿಕ ರಸದೌತಣ ನೀಡುವ ಉದ್ದೇಶದಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ಚಲನಚಿತ್ರ ನಟ ನಟಿಯರು, ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೇದಿಕೆಯ ಆಕರ್ಷಣೆಯಾಗಿ ಚಲನಚಿತ್ರ ನಟರಾದ ಡಾಲಿ‌ ಧನಂಜಯ್ಯ, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಧ್ರುವಸರ್ಜಾ ಆಗಮಿಸಲಿದ್ದು, ಪ್ರಸಿದ್ದ ಹಾಡುಗಾರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರು ರಸಮಂಜರಿ ನಡೆಸಿಕೊಡುವರು. ಅನುಶ್ರೀ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ‌ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ವಿಧಾನ‌ ಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ, ರಾಮೋಜಿಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸೇರಿದಂತೆ ಪ್ರಮುಖ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಈಗಾಗಲೇ ನಗರದ ಪ್ರಮುಖ‌ ರಸ್ತೆಗಳ ಇಕ್ಕೆಲಗಳು ಮತ್ತು ವೃತ್ತಗಳು, ಕಚೇರಿಗಳು ಸೇರಿದಂತೆ ನಗರದೆಲ್ಲೆಡೆ ವಿವಿಧ ವರ್ಣಮಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾ ಮನೋರಂಜನೆ‌ ನೀಡುವ ಆಟಿಕೆಗಳು ಮಧುವಣ ಗಿತ್ತಿಯಂತೆ ಸಿದ್ದವಾಗಿವೆ.

ಸರ್ವ ಧರ್ಮ‌ ಸಂದೇಶ ಸಾರುವ ದೇವರುಗಳ ವಿದ್ಯುತ್ ಕಟೌಟ್ ಗಳು ಅಳವಡಿಸಲಾಗುವುದು. ವೇದಿಕೆ ‌ಮುಂಭಾಗ ಸುಮಾರು 20 ಸಾವಿರ ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಆಸನಗಳ ವ್ಯವಸ್ಥೆ, ಎಲ್ ಇಡಿ ಪರದೆಗಳನ್ನು ಅಳವಡಿಸಲಾಗುವುದು. ವೇದಿಕೆ ಮುಂಭಾಗ ಮುಖ್ಯ ಅತಿಥಿಗಳು, ವಿಶೇಷ ಆಹ್ವಾನಿತರು ಹಾಗೂ ಮಾಧ್ಯಮದವರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ರಾಜಶೇಖರ್, ಜಿಪಂ‌ ಮಾಜಿ ಅಧ್ಯಕ್ಷ ರಾದ ಕೆ.ರಮೇಶ್, ನಾಗರಾಜು, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ವಿ.ಎಚ್.ರಾಜು, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು, ತಾಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ವಿಜಯಕುಮಾರಿ, ಅಸ್ಮದ್, ಅಕ್ಲೀಂ, ಗಿರಿಜಮ್ಮ, ಆಯಿಷಾ ಬಾನು, ನಿಜಾಂ‌ ಷರೀಪ್, ಪವಿತ್ರಾ, ಜಯಲಕ್ಷ್ಮಮ್ಮ, ಆರೀಪ್, ಮುಖಂಡರಾದ ಪರ್ವಿಜ್ ಪಾಷ, ಶ್ರೀನಿವಾಸ್, ಜಯಣ್ಣ, ಪ್ರಭಣ್ಣ, ಅಮ್ಜದ್ ಸಾಹುಕಾರ್, ಚನ್ನಮಾನಹಳ್ಳಿ ಶ್ರೀನಿವಾಸ್, ಉಮೇಶ್, ನಾಗಮ್ಮ, ಶಶಿಕಲಾ, ವಸೀಂ, ಬಾಲಾಜಿ, ಪ್ರಸನ್ನ, ಮಹೇಂದ್ರ, ವೀರಭದ್ರಸ್ವಾಮಿ, ಮಹದೇವ, ಪುನಿತ್, ಬೈರೇಗೌಡ, ಸಮದ್, ವೆಂಕಟೇಶ್, ಜಗದೀಶ್, ಪುಟ್ಟಸ್ವಾಮಿ, ಶಿವಶಂಕರ್, ವಡೇರಹಳ್ಳಿ ಚಂದ್ರು, ವಕೀಲ ರವಿ ಇತರರಿದ್ದರು.ಒಂದೂವರೆ ಕೋಟಿ ವೆಚ್ಚದಲ್ಲಿ ಅದ್ಧೂರಿ ಉತ್ಸವ:

ಸರ್ವ, ಧರ್ಮಗಳ ಸಮನ್ವಯತೆಯನ್ನು ಸಾರುವ ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಹಬ್ಬಾಚರಣೆ ಮಾಡಲು ನಾನಿದ್ದೇನೆ. ವಸೂಲಿ ಮಾಡಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಖಡಕ್ ಮಾತುಗಳನ್ನಾಡಿದರು.

ಕರಗ ಮಹೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರಕ್ಕಾಗಿ ಸುಮಾರು ಒಂದು ಕೋಟಿ ರುಪಾಯಿಗೂ ಹೆಚ್ಚು ಖರ್ಚಾಗುವ ಅಂದಾಜಿದೆ. ಇದರಲ್ಲಿ ಆಟಿಕೆ, ವಸ್ತು ಪ್ರದರ್ಶನದಿಂದ ಬರುವ ಹಣದ ಜೊತೆಗೆ ತಮ್ಮ ಸ್ವಂತ ಖರ್ಚಿನಿಂದ ಕಾರ್ಯಕ್ರಮ ನಡೆಸಲಾಗುವುದು. ನಾನು ಜನರ ಸೇವೆ ಮಾಡಲು ಬಂದಿರುವ ಸೇವಕ ಎಂದರು.

ಯಾರಿಗೂ ವಸೂಲಿಗೆ ಅವಕಾಶ ನೀಡುವುದಿಲ್ಲ. ಹಣ ಕೊಡುವವರು ನೇರವಾಗಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಹುಂಡಿಗೆ ಹಾಕಿ ಈ‌ ಮಾತನ್ನು ನಾನು ಕಳೆದ ವರ್ಷ ಕೂಡ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ, ನಮ್ಮ ಕಾರ್ಯಕರ್ತರೊಟ್ಟಿಗೆ ಸೇರಿ ನಾವೇ ಅದ್ಧೂರಿಯಾಗಿ ಒಂದೂವರೆ ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಮಡಿಲಕ್ಕಿ ವಿಶೇಷ ಪೂಜೆ :

ಕಳೆದ ಎರಡು ದಿನಗಳ ಹಿಂದೆ ಯಶಸ್ವಿಯಾಗಿ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಡಿಲಕ್ಕಿ ಸೇವೆ ಮಾಡಿ ಪೂಜೆ ನೆರವೇರಿಸಿದ್ದು, ಭಾನುವಾರ ಸಂಜೆ ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ನಗರದಲ್ಲಿ‌ ಕರಗ ಮತ್ತು ಕೊಂಡೋತ್ಸವ ನಡೆಯುವ ದೇವಾಲಯಗಳಿಗೆ ಪಕ್ಷದ ಮುಖಂಡರೊಂದಿಗೆ ಮಡಿಲಕ್ಕಿ, ಸೀರೆ, ಕಾಣಿಕೆ ನೀಡಿ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿಸುತ್ತೇನೆ. ಆ‌ ಮೂಲಕ ನಾಡಿನಲ್ಲಿ‌ ಉತ್ತಮ ಮಳೆ ಬೆಳೆಯಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ. ಎಲ್ಲೆಡೆ ಶಾಂತಿ‌ ನೆಲೆಸಲಿ ಎಂದು ನಾಡ ದೇವತೆಗಳಲ್ಲಿ ಪ್ರಾರ್ಥಿಸುತ್ತೇನೆ.

-ಇಕ್ಬಾಲ್ ಹುಸೇನ್, ಶಾಸಕರು

Share this article