ಕನ್ನಡಪ್ರಭ ವಾರ್ತೆ ವಿಜಯಪುರ
ಏ.8 ರಿಂದ 12ರವರೆಗೆ ತಾಲೂಕಿನ ಕತಕನಹಳ್ಳಿ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಕತಕನಹಳ್ಳಿ ಸದಾಶಿವ ಮಠದ ಪೀಠಾಧಿಪತಿ ಪೂಜ್ಯ ಶಿವಯ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀಸದಾಶಿವನ ಭಕ್ತರು ಪ್ರತಿವರ್ಷ ಜಾತ್ರೆ ಹಮ್ಮಿಕೊಳ್ಳುತ್ತಿದ್ದು, ಈ ವರ್ಷ ಮಠದ ಪರಂಪರೆಯನ್ನು ಸಾರುವ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ಧರಾಮೇಶ್ವರ ಲೀಲಾಮೃತ ಗ್ರಂಥ ಲೋಕಾರ್ಪಣೆಯಾಗಲಿದೆ. ಹಾಗಾಗಿ ಇದೊಂದು ವಿಶೇಷ ಜಾತ್ರೆಯಾಗಿ ಭಕ್ತರ ಮನದಲ್ಲಿ ಉಳಿಯಲಿದೆ ಎಂದು ಹೇಳಿದರು. ಸಾಮೂಹಿಕ ವಿವಾಹ, ಪುರಾಣ ಪ್ರವಚನ, ಕುಸ್ತಿ, ಭಾರ ಎತ್ತುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳು 5 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿವೆ. ಯಾತ್ರೆಯಲ್ಲಿ ಅಖಂಡ ದಾಸೋಹ ಇರಲಿದ್ದು, ಭಕ್ತರು ತಾವೇ ಮಾಡಿ, ಇತರರಿಗೂ ಉಣಬಡಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, 8ರಂದು ಬೆಳಿಗ್ಗೆ ಜಾನುವಾರು ಜಾತ್ರೆಯನ್ನು ಪೂಜ್ಯ ಶಿವಯ್ಯ ಮಹಾಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ. 10.30 ಗಂಟೆಗೆ ಕೃಷಿ ಮೇಳ, ಮಧ್ಯಾಹ್ನ 4 ಗಂಟೆಗೆ ಕೆಸರಿನಲ್ಲಿ ಮನುಷ್ಯರ ಓಟ, ಸಂಜೆ 7 ಗಂಟೆಗೆ ಜ್ಞಾನ ದೀಪೋತ್ಸವ ನಡೆಯಲಿದೆ. 9ರಂದು ಬೆಳಿಗ್ಗೆ ಕತೃ ಗದ್ದುಗೆಗೆ ರುದ್ರಾಭೀಷೇಕ ಹಾಗೂ ಸಕಲ ವಾದ್ಯಗಳೊಂದಿಗೆ ಕುಂಭಾಭೀಷೇಕ, 10.30ಕ್ಕೆ ರಸಪ್ರಶ್ನೆ ಸಂಜೆ 7 ಗಂಟೆಗೆ ಶ್ರೀ ಶ್ರೀಶೈಲ ಹಿರೇಮಠ ಅವರಿಂದ ಬಬಲಾದಿ ಮಹಾತ್ಮರ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮ ಜರುಗಲಿದೆ. ವಿಶೇಷವಾಗಿ ಗ್ರಂಥ ಮೆರವಣಿಗೆ ವೇಳೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಮಧುವನ ಹೊಟೇಲ್ ಮಾಲಿಕ ಬಾಬುಗೌಡ ಬಿರಾದಾರ, ವಿಜಯಪುರದ ಉದ್ಯಮಿ ರಾಜು ಗುಡ್ಡೊಡಗಿ ಗ್ರಂಥ ಕತೃ ವೇಧಮೂರ್ತಿ ಶ್ರೀಶೈಲ ಸ್ವಾಮಿಜಿ, ವಿಜಯ ಜೋಶಿ ಉಪಸ್ಥಿತರಿದ್ದರು.