- ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಜನ್ಮ ವರ್ಧಂತಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುರಂಭಾಪುರಿ ಪೀಠದ ಪ್ರಸ್ತುತ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಾವು ಪೀಠಾರೋಹಣ ಮಾಡಿದ ಬಳಿಕ ಶ್ರೀಪೀಠವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ದು ಶ್ರೀಪೀಠಕ್ಕೆ ಅಭಿವೃದ್ಧಿಯ ಮೈಲಿಗಲ್ಲನ್ನೆ ತಂದಿದ್ದಾರೆ ಎಂದು ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜು ಪ್ರಾಚಾರ್ಯ ಎಚ್.ಆರ್.ಆನಂದ್ ಹೇಳಿದರು.ರೇಣುಕನಗರದ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ 69ನೇ ಜನ್ಮ ವರ್ಧಂತಿಯಲ್ಲಿ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಸಂವರ್ಧಿಸಲಿ. ಶಾಂತಿ, ಸಮೃದ್ಧಿ ಸರ್ವರಿಗಾಗಲಿ ಎಂಬ ಘೋಷ ವಾಕ್ಯದಂತೆ ರಂಭಾಪುರಿ ಜಗದ್ಗುರು ಪೀಠವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ದು ಶ್ರೀಪೀಠದ ಹೆಸರನ್ನು ಕೀರ್ತಿಯ ಶಿಖರಕ್ಕೆ ಏರಿಸಿದ್ದಾರೆ.
ಅಕ್ಷರ ದಾಸೋಹ, ಅನ್ನ ದಾಸೋಹ ನಿರಂತರವಾಗಿ ಶ್ರೀಪೀಠದಲ್ಲಿ ನಡೆಯುತ್ತಿದ್ದು, ರಂಭಾಪುರಿ ಜಗದ್ಗುರು ತ್ರಿವಿಧ ದಾಸೋಹಿಗಳಾಗಿದ್ದಾರೆ. ಮಲೆನಾಡಿನ ಗ್ರಾಮೀಣ ಪ್ರದೇಶದ ಯುವಕರಿಗೆ ಜಗದ್ಗುರು ರೇಣುಕಾಚಾರ್ಯ ಐಟಿಐ ಸಂಸ್ಥೆಯನ್ನು ಉನ್ನತ ದರ್ಜೆಗೆ ಏರಿಸಲಾಗಿದ್ದು, ಮಲೆನಾಡಿನ ಗ್ರಾಮೀಣ ಪ್ರದೇಶದ ಯುವಕರು ನಿರುದ್ಯೋಗಿಗಳಾಗಬಾರದು ಎಂಬ ಸದುದ್ದೇಶದಿಂದ ಐಟಿಐ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ತರಬೇತಿ ನೀಡಿ, ಉದ್ಯೋಗವನ್ನೂ ಕೊಡಿಸಲಾಗುತ್ತಿದೆ ಎಂದರು.ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಜಗದೀಶ್ಚಂದ್ರ ಮಾತನಾಡಿ, ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಶ್ರೀಪೀಠವನ್ನು ಆರೋಹಣ ಮಾಡಿದ ಬಳಿಕ ಹೊಸ ಕ್ರಾಂತಿಯನ್ನೇ ಮಾಡಿದ್ದು, ನಿರಂತರವಾಗಿ ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡುತ್ತ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಭಕ್ತರ ಮನದಲ್ಲಿ ನೆಲೆಯೂರಿರುವ ಅವರು ನಡೆದಾಡುವ ರೇಣುಕರೆಂದೆ ಕರೆಯಲ್ಪಡುತ್ತಿದ್ದಾರೆ.ರಂಭಾಪುರಿ ಪೀಠದಲ್ಲಿ ಐತಿಹಾಸಿಕ, ಚಾರಿತ್ರಿಕವಾದ ಹೊಸ ಕೆಲಸಗಳನ್ನು ಆರಂಭಿಸಿ ಭಕ್ತರಿಗೆ ಉತ್ತಮ ಸೇವೆಗಳು ಲಭಿಸುವಂತೆ ಮಾಡಿದ್ದಾರೆ. ರಂಭಾಪುರಿ ಪೀಠದಲ್ಲಿ ಇದೀಗ ಜಗದ್ಗುರು ರೇಣುಕಾಚಾರ್ಯರ ೫೧ ಅಡಿ ಎತ್ತರದ ಶಿಲಾಮಯ ಮೂರ್ತಿಯನ್ನು ಸ್ಥಾಪನೆ ಮಾಡಲು ಅಡಿಗಲ್ಲನ್ನು ಹಾಕಿದ್ದು, ಅದರ ಕಾರ್ಯಗಳು ಭರದಿಂದ ಸಾಗಿವೆ. ರೇಣುಕಾಚಾರ್ಯರ ಮೂರ್ತಿ ಸ್ಥಾಪನೆಗೊಂಡಲ್ಲಿ ಶ್ರೀಪೀಠಕ್ಕೆ ಹೊಸ ಮೆರುಗು ಲಭಿಸಲಿದ್ದು, ಇದರೊಂದಿಗೆ ರೇಣುಕಾ ಚಾರ್ಯರ ಥೀಮ್ ಪಾರ್ಕ್ ಆರಂಭದ ಉದ್ದೇಶವನ್ನು ಜಗದ್ಗುರುಗಳು ಹೊಂದಿದ್ದಾರೆ. ಇದು ಆರಂಭಗೊಂಡಲ್ಲಿ ಬಾಳೆಹೊನ್ನೂರಿಗೆ ನಿತ್ಯವೂ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿ ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಲಿದೆ ಎಂದರು.ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ನಿರಂತರ ಬೆಂಬಲಿಸುತ್ತಿರುವ ರಂಭಾಪುರಿ ಜಗದ್ಗುರು ಸಾಹಿತಿಗಳಿಗೆ, ಕವಿಗಳಿಗೆ ಅಪಾರ ಗೌರವವನ್ನು ನೀಡುತ್ತಿದ್ದಾರೆ. ಸಾಹಿತ್ಯ, ಸಂಸ್ಕೃತಿ ಸಂವರ್ಧಿಸಲಿ ಎಂಬ ಘೋಷವಾಕ್ಯವನ್ನು ಹೇಳಿ ಸಾಹಿತ್ಯ ಪ್ರೇಮಿಗಳ ಮನಗೆದ್ದಿದ್ದಾರೆ ಎಂದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜಭಟ್, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್, ಶಿಕ್ಷಕರಾದ ಉಮೇಶ್, ಮಲ್ಲಿಕಾರ್ಜುನ, ಅಶೋಕ್, ಚಂದ್ರಶೇಖರ್, ಶ್ರೀನಿವಾಸ್, ಪ್ರಕಾಶ್, ಅಖಿಲೇಶ್ ಮತ್ತಿತರರು ಇದ್ದರು. ಶ್ರೀರಂಭಾಪುರಿ ಜಗದ್ಗುರುಗಳ ಜನ್ಮ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.೦೭ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ರೇಣುಕನಗರದ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜಿನಲ್ಲಿ ರಂಭಾಪುರಿ ಜಗದ್ಗುರುಗಳ ಜನ್ಮ ವರ್ಧಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಎಚ್.ಆರ್.ಆನಂದ್, ಉಮೇಶ್, ಮಲ್ಲಿಕಾರ್ಜುನ, ಚಂದ್ರಶೇಖರ್, ಶ್ರೀನಿವಾಸ್, ಪ್ರಕಾಶ್, ಅಖಿಲೇಶ್ ಇದ್ದರು.