ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ.11ರಿಂದ ಏಳು ದಿನ ನಡೆಯುವ ಶ್ರೀ ರಾಘವೇಂದ್ರ ರಾಯರ ಸಪ್ತಾಹದಲ್ಲಿ ಪ್ರಾತಃಕಾಲ 6ಕ್ಕೆ ಸುಪ್ರಭಾತ ಪ್ರಾತಃಸ್ಮರಣೆ, 7.30ಕ್ಕೆ ಗುರುರಾಯರಿಗೆ ಅಷ್ಟೋತ್ತರ ಸಹಿತ ಕ್ಷೀರಾಭಿಷೇಕ, 8.30ಕ್ಕೆ ಪ್ರವಚನ, ಶ್ರೀ ಪಲಿಮಾರು ಮಠದ ಸುಧಾ ವಿದ್ಯಾರ್ಥಿಗಳಿಂದ ನಡೆಯಲಿದೆ. ಬೆಳಿಗ್ಗೆ 9ರಿಂದ 11ರವರೆಗೆ ಶ್ರೀ ರಾಘವೇಂದ್ರ ರಾಯರ ಅಷ್ಟಾಕ್ಷರ ಮಂತ್ರದ ಸ್ವಾಹಾಕಾರ ಹೋಮವಿರುತ್ತದೆ ಎಂದರು.
ಬೆಲಿಗ್ಗೆ 10.30ಕ್ಕೆ ಪಾದಪೂಜೆ, ಕನಕಾಭಿಷೇಕ, ಲಕ್ಷ ಪುಷ್ಪಾರ್ಚನೆ, ಮಹಾ ಮಂಗಳಾರತಿ ನಡೆಯಲಿದೆ. ಸಂಜೆ 7.30ಕ್ಕೆ ಶ್ರೀ ಗುರುರಾಜರಿಗೆ ದೀಪೋತ್ಸವ, ಸ್ವಸ್ತಿವಾಚನ, ಮಹಾನೀರಾಜನ ನೆರವೇರಲಿದೆ. ಮಾ.11ರಂದು ಶ್ರೀ ಗಣಪತಿ, ನವಗ್ರಹ ಹೋಮ, ಜ.12ಕ್ಕೆ ಮನ್ಯುಸೂಕ್ತ ಪುರಶ್ಚರಣ ಹೋಮ, ಶ್ರೀ ಹರಿವಾಯುಸ್ತುತಿ ಹೋಮ, ಜ.13ರಂದು ಶ್ರೀ ಪವಮಾನ ಹೋಮ, ಜ.14ರಂದು ಶ್ರೀ ಹಯಗ್ರೀವ ಮತ್ತು ಶ್ರೀ ವೇದವ್ಯಾಸ ಮಂತ್ರಗಳ ಹೋಮ, ಜ.15ಕ್ಕೆ ಶ್ರೀ ಪುರುಷ ಸೂಕ್ತ, ಶ್ರೀ ಸೂಕ್ತ ಹೋಮ, ಜ.16ಕ್ಕೆ ಶ್ರೀ ಸುದರ್ಶನ ಹೋಮ, ಜ.17ಕ್ಕೆ ಶ್ರೀ ಧನ್ವಂತರಿ ಹೋಮ ನಡೆಯಲಿದೆ ಎಂದು ಅವರು ಹೇಳಿದರು.ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್ ಮಾತನಾಡಿ, ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಕ್ರಮಕ್ಕೆ ಮಂತ್ರಾಲಯ ಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಅರ್ಚಕರಾದ ಶ್ರೀ ಅರ್ಚಕ ಪರಿಮಳಾಚಾರ್ಯ ಕುಟುಂಬದವರು ತಮ್ಮ ಮನೆಯಲ್ಲಿ ನಿತ್ಯ ಪೂಜೆಗೊಳ್ಳುವ ಶ್ರೀ ಗುರುರಾಯರ ಚಲ ಬೃಂದಾವನ ಮತ್ತು ಶ್ರೀ ಪ್ರಹ್ಲಾದರಾಜರ ವಿಗ್ರಹದೊಂದಿಗೆ ದಾವಣಗೆರೆ ನಗರಕ್ಕೆ ಆಗಮಿಸಿ, ಏಳು ದಿನಗಳ ಕಾಲ ಬೃಂದಾವನಕ್ಕೆ ಪೂಜಾ ವಿಧಿ ವಿಧಾನಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಕೋಶಾಧ್ಯಕ್ಷ ಡಾ.ಶಶಿಕಾಂತ, ಖಜಾಂಚಿ ಜೆ.ಬದರಿ ನಾರಾಯಣ, ಪಿ.ಕೆ.ಪ್ರಕಾಶ, ಶ್ರೀನಿವಾಸ ನರಗನಹಳ್ಳಿ, ಪಲ್ಲಕ್ಕಿ ವಾಸುದೇವಾಚಾರ್, ಸತ್ಯಬೋಧ ಕುಲಕರ್ಣಿ ಇತರರು ಇದ್ದರು.