ಕನ್ನಡಪ್ರಭ ವಾರ್ತೆ ಸಾವಳಗಿ
ಗನ್ ತರಬೇತಿ, ಕರಾಟೆ ಸೇರಿದಂತೆ ವಿವಿಧ ಸಾಹಸ ತರಬೇತಿಯನ್ನು 2024 ಡಿ.24ರಿಂದ ಡಿ.29ರವರೆಗೆ ಶ್ರೀ ರಾಮ ಸೇನೆಯ ಕಾರ್ಯಕರ್ತರು ಮತ್ತು ಆಯೋಜಕರು ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಿದ್ದರು. ಬಂದೂಕು ತರಬೇತಿ ನೀಡಿದ್ದಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದ್ದಾರೆ.
ಪ್ರಕಾಶ ಪತ್ತಾರ, ಮಹೇಶ ಬಿರಾದಾರ, ಯಮನಪ್ಪ ಕೋರಿ, ಆನಂದ ಜಂಬಗಿಮಠ, ರಾಜು ಖಾನಪ್ಪನವರ, ಗಂಗಾಧರ ಕುಲಕರ್ಣಿ, ಮಹೇಶ ರೋಕಡೆ, ಮಹಾಂತೇಶ ಹೊನ್ನಪ್ಪನವರ, ಭರತ ಲದ್ದಿ, ಈರಪ್ಪ ಪೂಜಾರಿ ಸೇರಿದಂತೆ 27 ಜನ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಶ್ರೀರಾಮ ಸೇನೆಯಿಂದ ಯುವಕರಿಗೆ ವ್ಯಕ್ತಿತ್ವ ವಿಕಸನ ಅಭ್ಯಾಸ ವರ್ಗ ತರಬೇತಿ, ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡಲಾಗಿತ್ತು. ದಂಡ ಪ್ರಯೋಗ, ನಕಲಿ ಗನ್ ಮೂಲಕ ತರಬೇತಿ, ಕರಾಟೆ ಸೇರಿದಂತೆ ವಿವಿಧ ಕೌಶಲ್ಯ ತರಬೇತಿ ನೀಡಲಾಗಿತ್ತು. ಸುರಕ್ಷತೆಗಾಗಿ ವಿವಿಧ ರಕ್ಷಾ ತರಬೇತಿ, ಮುಳ್ಳುಕಂಟಿಯ ಗುಂಡಿಯಲ್ಲಿ ಹಾದು ಹೋಗುವುದು, ಸಂದಿಗ್ಧ ಸ್ಥಳಗಳಲ್ಲಿ ಪಾರಾಗುವುದು, ಬಂದೂಕು ಬಳಕೆ ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿ ಕೊಡುತ್ತಿದ್ದರು ಎನ್ನಲಾಗಿದೆ. ನಿಂಗಪ್ಪ ಹೂಗಾರ ಎಂಬುವರ ದೂರಿನ ಮೇರೆಗೆ ಪ್ರಕರಣ ದಾಕಲಾಗಿದೆ. ಈ ಕುರಿತು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರತಿವರ್ಷ ಯುವಕರಿಗೆ ಕಲಿಸುತ್ತೇವೆ ಇದೇನು ಹೊಸದೇನಲ್ಲ: ಪ್ರಮೋದ ಮುತಾಲಿಕ್ಕಾಜಿಬೀಳಗಿಯಲ್ಲಿ ಶಾರಿರೀಕ ಶಿಕ್ಷಣ ವರ್ಗ, ವ್ಯಕ್ತಿತ್ವ ವಿಕಸನ ಶಿಬಿರವನ್ನು ಶ್ರೀರಾಮಸೇನೆ ಸಂಘಟನೆಯಿಂದ ಆಯೋಜಿಸಲಾಗಿತ್ತು. ಯುವಕರಲ್ಲಿ ಶೌರ್ಯ, ಶಿಸ್ತು, ದುಶ್ಚಟ ಮುಕ್ತ ಯುವಕರನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿವರ್ಷ ಈ ರೀತಿಯ ಕಾರ್ಯಕ್ರಮ ಯೋಜನೆ ಮಾಡುತ್ತೇವೆ. ಪ್ರತಿವರ್ಷ ಯುವಕರಿಗೆ ಏರ್ ಗನ್ ಮೂಲಕ ಗುರಿ ಇಡುವ ಪ್ರಕ್ರಿಯೆ ಕೂಡ ಕಲಿಸುತ್ತೇವೆ. ಇದೇನು ಹೊಸದೇನಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಯುವಕರಲ್ಲಿ ದೇಶಭಕ್ತಿ ಮೂಡಿಸಲು, ಶಿಸ್ತು ಕಲಿಸಲು ನಮಗೆ ಅವಕಾಶ ಮಾಡಿಕೊಡಿ. ಇಂದು ಮದ್ಯ, ಗುಟಕಾ, ಡ್ರಗ್ಸ್‌ನಲ್ಲಿ ಮುಳುಗುವ ಯುವಕರನ್ನು ದುಶ್ಚಟಮುಕ್ತ ಮಾಡುವ ಪ್ರಕ್ರಿಯೆ ಮಾಡುತ್ತಿದ್ದೇವೆ. ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿಲ್ಲ. ಕೇಸ್ ಹಾಕಿ ಹೆದರಿಸುವ ನಿಮ್ಮ ಹೆದರಿಕೆಗೆ ನಾವು ಹೆದರುವವರಲ್ಲ. ಪ್ರತಿವರ್ಷ ಮಾಡ್ತೀವಿ, ಇದನ್ನು ಮುಂದೆಯೂ ಮಾಡುತ್ತೇವೆ. ಇದೇ ಏರ್ ಗನ್ ಮೂಲಕ ತರಬೇತಿ ಮಾಡುತ್ತೇವೆ. ತಾಕತ್ತಿದ್ರೆ ತಡೀರಿ ನೋಡೋಣ ಎಂದು ಸವಾಲು ಹಾಕಿದ ಅವರು, ಪೊಲೀಸ್ ಇಲಾಖೆ ಡ್ರಗ್ ಮಾಫಿಯಾ ಬೆಳೆಸುತ್ತಿದೆ. ಕಾಂಗ್ರೆಸ್ ರಾಜಕಾರಣಿಗಳು ಡ್ರಗ್ ಮಾಫಿಯಾ ಬೆಳೆಸುತ್ತಿದ್ದಾರೆ. ನಮ್ಮ ಶಿಬಿರದ ಮೇಲೆ ಕೇಸ್ ಹಾಕುತ್ತೀರಿ ಎಂದರೆ ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ರೆ ಕೇಸ್ ವಾಪಸ್ ತೆಗೆದುಕೊಳ್ಳಿ. ಇಲ್ಲದಿದ್ರೆ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.