ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಗವಾನ್ ಶ್ರೀಕೃಷ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದ ಉಪ ತಹಸೀಲ್ದಾರ್ ಲೋಕೇಶ್, ಕೃಷ್ಣ ಜನ್ಮಾಷ್ಟಮಿ ಶುಭ ಕೋರಿದರು. ಶ್ರೀಕೃಷ್ಣನ ಜೀವನ ಸಂದೇಶಗಳನ್ನು ನಮ್ಮದಾಗಿಸಿಕೊಂಡು ನಮ್ಮ ಜೀವನವನ್ನು ಪರಿಪೂರ್ಣಗೊಳಿಸುವತ್ತ ನಾವು ಸಾಗಬೇಕು ಎಂದರು.
ಭಗವಂತ ಧರ್ಮದ ಪಕ್ಷಪಾತಿ. ಧರ್ಮ ಮಾರ್ಗದಲ್ಲಿ ಸಾಗಿದವರಿಗೆ ಮಾತ್ರ ಭಗವಂತನ ಕೃಪೆ ಇರುತ್ತದೆ. ಭಗವಾನ್ ಶ್ರೀ ಕೃಷ್ಣನ ಜೀವನ ಸಂದೇಶವೇ ನಮ್ಮ ಬದುಕಿನ ಮಾರ್ಗವಾಗಬೇಕೆಂದು ಆಶಿಸಿದರು.ಶಿರಸ್ತೇದಾರ್ ರವಿ, ಸಿಡಿಪಿಒ ಅರುಣಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.ಶ್ರೀಕುವೆಂಪು ಶಾಲೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ
ಕನ್ನಡಪ್ರಭ ವಾರ್ತೆ ನಾಗಮಂಗಲಪಟ್ಟಣದ ಶ್ರೀಕುವೆಂಪು ಶಾಲೆಯಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಶಾಲೆ ಪುಟಾಣಿ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರಂತೆ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಶಾಲೆಯಲ್ಲಿ ಶ್ರೀ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡಿ ಅದಕ್ಕೆ ಹೂವಿನಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.ಪೋಷಕರು ಕೂಡ ತಮ್ಮ ಮಕ್ಕಳಿಗೆ ಕೃಷ್ಣ ರಾಧೆಯರ ಉಡುಗೆಯನ್ನು ತೊಡಿಸಿಕೊಂಡು ಶಾಲೆಗೆ ಕರೆತಂದರು. ಮುಸ್ಲಿಂ ಬಾಂಧವ ಮಕ್ಕಳೂ ಕೂಡ ಶ್ರೀಕೃಷ್ಣನ ವೇಷ ಧರಿಸಿ ಶಾಲೆಗೆ ಆಗಮಿಸಿದ್ದು ವಿಶೇಷವಾಗಿತ್ತು.
ಶಾಲೆಯಲ್ಲಿ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೃಷ್ಣ ಹಾಗೂ ರಾಧೆಯರ ಉಡುಗೆ ತೊಟ್ಟು ವಿಶೇಷ ಆಕರ್ಷಣೆ ನೀಡಿದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶ್ರೀಕೃಷ್ಣನ ಕುರಿತಾದ ಹಾಡುಗಳಿಗೆ ವೇಷ ಧರಿಸಿದ್ದ ಮಕ್ಕಳು ಹೆಜ್ಜೆ ಹಾಕಿ ನಲಿಯುವುದರೊಂದಿಗೆ ಶಿಕ್ಷಕವೃಂದ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾದರು.ಕಾರ್ಯಕ್ರಮದಲ್ಲಿ ಶಾಲೆ ಅಧ್ಯಕ್ಷ ಸಿ.ಎನ್.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಎಂ.ಎಸ್.ರಾಮಸ್ವಾಮಿಗೌಡ, ಕಲ್ಲುದೇವನಹಳ್ಳಿ ಶಿವಣ್ಣ, ಮುಖ್ಯಶಿಕ್ಷಕ ಮೋಹನ್ ಕುಮಾರ್ ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಇದ್ದರು.