ಕ್ರಷರ್ ಬಂದ್ ಮಾಡಿಸಿ, ಇಲ್ಲ ಗ್ರಾಮವನ್ನೇ ಸ್ಥಳಾಂತರಿಸಿ!

KannadaprabhaNewsNetwork |  
Published : Aug 09, 2025, 12:00 AM IST
8ಎಚ್‌ಯುಬಿ25, 26ಮಜ್ಜಿಗುಡ್ಡ ಮತ್ತು ಕೋಳಿವಾಡ ಮಧ್ಯೆ ನಡೆಯುವ ಕಲ್ಲುಗಣಿಗಾರಿಕೆ ತಡೆಯಬೇಕು ಇಲ್ಲವೇ ಗ್ರಾಮವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಮಜ್ಜಿಗುಡ್ಡ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಗಣಿಗಾರಿಕೆಯಿಂದ ದಿನನಿತ್ಯ ಕಿರಿಕಿರಿ ಆಗುತ್ತಿದ್ದು ಗಣಿಗಾರಿಕೆ ಕಲ್ಲು ಬ್ಲಾಸ್ಟ್ ಮಾಡಿದಾಗ ಬರುವ ಧೂಳು, ರಾಸಾನಿಕಯುಕ್ತ ಪೌಡರ್ ಸುತ್ತ ಇರುವ ಹೊಲಗಳಲ್ಲಿನ ಬೆಳೆಯ ಮೇಲೆ ಬಿದ್ದು ಅಪಾರ ಪ್ರಮಾಣದ ಹಾನಿ ಆಗುತ್ತಿದೆ. ಅಲ್ಲದೆ, ಗ್ರಾಮದಲ್ಲಿನ ಕಟ್ಟಡ ಮತ್ತು ಸರ್ಕಾರಿ ಶಾಲೆಗಳು ಅದರುತ್ತಿವೆ.

ಅಣ್ಣಿಗೇರಿ: ಮಜ್ಜಿಗುಡ್ಡ ಮತ್ತು ಕೋಳಿವಾಡ ಮಧ್ಯೆ ನಡೆಯುವ ಕಲ್ಲುಗಣಿಗಾರಿಕೆ ತಡೆಯಬೇಕು ಇಲ್ಲವೇ ಗ್ರಾಮವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಮಜ್ಜಿಗುಡ್ಡ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಗಣಿಗಾರಿಕೆಯಿಂದ ದಿನನಿತ್ಯ ಕಿರಿಕಿರಿ ಆಗುತ್ತಿದ್ದು ಗಣಿಗಾರಿಕೆ ಕಲ್ಲು ಬ್ಲಾಸ್ಟ್ ಮಾಡಿದಾಗ ಬರುವ ಧೂಳು, ರಾಸಾನಿಕಯುಕ್ತ ಪೌಡರ್ ಸುತ್ತ ಇರುವ ಹೊಲಗಳಲ್ಲಿನ ಬೆಳೆಯ ಮೇಲೆ ಬಿದ್ದು ಅಪಾರ ಪ್ರಮಾಣದ ಹಾನಿ ಆಗುತ್ತಿದೆ. ಅಲ್ಲದೆ, ಗ್ರಾಮದಲ್ಲಿನ ಕಟ್ಟಡ ಮತ್ತು ಸರ್ಕಾರಿ ಶಾಲೆಗಳು ಅದರುತ್ತಿವೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ತಾಲೂಕು ದಂಡಾಧಿಕಾರಿ ಮಂಜುನಾಥ ದಾಸಪ್ಪನವರ, ತಾಪಂ ಇಒ ಪಿ.ಆರ್. ಬಡೇಖಾನ ಗಣಿ ಮತ್ತು ಭೂ ಜ್ಞಾನ ಇಲಾಖೆಯ ಮೋಹನ್ ಸಾಲಿ ಅವರ ಮುಂದೆ ಗಣಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈಗಲಾದರೂ ಕ್ರಷರ್‌ಗಳನ್ನು ಬಂದ್ ಮಾಡಿಸಿ. ಇಲ್ಲವಾದರೆ ನಮ್ಮ ಗ್ರಾಮವನ್ನೇ ಸ್ಥಳಾಂತರಿಸಿ ಎಂದು ಆಗ್ರಹಿಸಿದರು.

ಈ ವೇಳೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು, ವೃದ್ಧರು ಮತ್ತು ಗ್ರಾಮಸ್ಥರು ತಮ್ಮ ಮನೆಗಳು ಮತ್ತು ಹೊಲಗಳಿಗೆ ಆದ ನಷ್ಟ ತೋರಿಸಿದರು.

ಸ್ಫೋಟದಿಂದ ಹೃದಯದ ತೊಂದರೆಗೊಳಗಾದ ವೃದ್ಧರು, ಕಿವುಡ, ಅಂಗವಿಕಲ ಮಕ್ಕಳನ್ನು ಅಧಿಕಾರಿಗಳಿಗೆ ತೋರಿಸಿದರು. ಹೊಸದಲ್ಲಿನ ಬೆಳೆಗಳನ್ನು ನಂಬಿ ಜೀವನ ಸಾಗಿಸುತ್ತಿರುವ ನಮಗೆ ಕ್ರಷರ್‌ನಿಂದ ನೆಮ್ಮದಿ ಇಲ್ಲದಂತಾಗಿದೆ. ಆದ್ದರಿಂದ, ಗಣಿಗಾರಿಕೆ ನಿಲ್ಲಿಸಿ ಇಲ್ಲವೇ ಗ್ರಾಮ ಸ್ಥಳಾoತರ ಮಾಡಿ ಎಂದು ಪಟ್ಟುಹಿಡಿದರು. ಸುಮಾರು ನಾಲ್ಕು ತಾಸು ವೀಕ್ಷಿಸಿದ ಅಧಿಕಾರಿಗಳು ಕೊನೆಗೆ ಆದಷ್ಟು ಬೇಗ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಪ್ರಭು ಗುಡ್ಡದ, ಬಸವರಾಜ್ ಜಿಲೇಗಾರ, ಆರ್.ಬಿ. ಅಕ್ಕಿ, ಯಲ್ಲಪ್ಪ ಮಾದರ, ನಿಂಗಪ್ಪ ಭದ್ರಾಪುರ, ಕುಮಾರ ಶೆಟ್ಟೆಕೇರಿ, ಈರಣ್ಣ ದೊಡ್ಡಮನಿ, ಅಶೋಕ್ ಸೈದಾಪುರ, ಶಿವಕುಮಾರ ಶಿರೂರು, ಶೇಖರ್ ತುಪ್ಪದ, ಕರೀಂಸಾಬ ಕಳ್ಳಿಮನಿ ಸೇರಿದಂತೆ ಅನೇಕರಿದ್ದರು.

ಕೂಡಲೇ ಗಣಿಗಾರಿಕೆ ನಿಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರಾದ ಗುರಪ್ಪ ಮಣ್ಣಾಪುರ ಹೇಳಿದರು. ಈ ಕುರಿತು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಕಮಲ್ ಮೋಹನ ಸಾಲಿ ಹೇಳಿದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ