ಶ್ವೇತಾ ಬಳ್ಳಾರಿ ಪಾಲಿಕೆ ನೂತನ ಮೇಯರ್‌

KannadaprabhaNewsNetwork | Updated : Jan 11 2024, 03:08 PM IST

ಸಾರಾಂಶ

ಕಾಂಗ್ರೆಸ್‌ನಿಂದ ಬಿ. ಶ್ವೇತಾ ಮತ್ತು ಬಿಜೆಪಿಯಿಂದ ಗುಡಿಗಂಟಿ ಹನುಮಂತಪ್ಪ ಮೇಯರ್‌ ಚುನಾವಣೆಗೆ ಸ್ಪರ್ಧಿಸಿದ್ದರು. ಶ್ವೇತಾ 29 ಮತ ಗಳಿಸಿ ಗೆಲುವು ಸಾಧಿಸಿದರೆ, ಹನುಮಂತಪ್ಪ ಕೇವಲ 12 ಮತ ಪಡೆದರು.

ಬಳ್ಳಾರಿ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 31ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಬಿ. ಶ್ವೇತಾ ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಬಿ. ಶ್ವೇತಾ ಮತ್ತು ಬಿಜೆಪಿಯಿಂದ ಗುಡಿಗಂಟಿ ಹನುಮಂತಪ್ಪ ಮೇಯರ್‌ ಚುನಾವಣೆಗೆ ಸ್ಪರ್ಧಿಸಿದ್ದರು. 

ಶ್ವೇತಾ 29 ಮತ ಗಳಿಸಿ ಗೆಲುವು ಸಾಧಿಸಿದರೆ, ಹನುಮಂತಪ್ಪ ಕೇವಲ 12 ಮತ ಪಡೆದರು.21 ಕಾಂಗ್ರೆಸ್ ಸದಸ್ಯರ ಜೊತೆ ಐವರು ಪಕ್ಷೇತರರು ಸೇರಿದಂತೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಹಾಗೂ ಶಾಸಕರು ಶ್ವೇತಾ ಪರ ಮತ ಚಲಾಯಿಸಿದರು.

ಪಾಲಿಕೆಯಲ್ಲಿ ಬಿಜೆಪಿ 13 ಸದಸ್ಯ ಬಲ ಹೊಂದಿತ್ತು. ಆದರೆ ಎನ್‌ ಗೋವಿಂದರಾಜು ಅನಾರೋಗ್ಯದಿಂದ ಗೈರಾಗಿದ್ದರಿಂದ ಹನುಮಂತಪ್ಪ ಅವರಿಗೆ ಕೇವಲ 12 ಮತ ಮಾತ್ರ ಬಂದವು. ಪಕ್ಷದ ಸಂಸದ, ವಿಧಾನ ಪರಿಷತ್‌ ಸದಸ್ಯರೂ ಸಹ ಗೈರಾಗಿದ್ದರು.

ಪಾಲಿಕೆ ಸಭಾಂಗಣದಲ್ಲಿ ಬುಧವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಆರಂಭದಲ್ಲಿ ಕಾಂಗ್ರೆಸ್‌ನ ಬಿ. ಶ್ವೇತಾ, ಕುಬೇರ ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಿಂಚು ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಗುಡಿಗಂಟಿ ಹನುಮಂತಪ್ಪ ಅವರು ಮೇಯರ್ ಸ್ಪರ್ಧೆಯಲ್ಲಿದ್ದರು. 

ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರು.ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಹೊಸ ಮೇಯರ್ ಆಯ್ಕೆಯನ್ನು ಘೋಷಿಸಿದರು. 

ಮಾಜಿ ಮೇಯರ್ ಡಿ. ತ್ರಿವೇಣಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಹಾಗೂ ಪಕ್ಷದ ಜಿಲ್ಲಾ ಪ್ರಮುಖರು ನೂತನ ಮೇಯರ್ ಬಿ. ಶ್ವೇತಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಎರಡನೇ ಅವಧಿಯ ಮೇಯರ್‌ ಆಗಿದ್ದ ಡಿ. ತ್ರಿವೇಣಿ ಅವರು ನ. 4ರಂದು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ಜರುಗಿತು. 

ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ತಮ್ಮದೇ ಬೆಂಬಲಿಗನ ಮೇಯರ್‌ನ್ನಾಗಿಸಲು ನಡೆಸಿದ ರಾಜಕೀಯ ಹಗ್ಗ ಜಗ್ಗಾಟದಿಂದಾಗಿಯೇ ಎರಡು ಬಾರಿ ಚುನಾವಣೆ ಮುಂದೂಡಲಾಗಿತ್ತು. ಹೀಗಾಗಿ ಮೇಯರ್ ಆಯ್ಕೆ ಚುನಾವಣೆ ತೀವ್ರ ಕುತೂಹಲಕ್ಕೆಡೆ ಮಾಡಿತ್ತು.

ಎಲ್ಲರೂ ಒಗ್ಗಟ್ಟಾಗಿದ್ದೇವೆ: ಚುನಾವಣೆ ಪ್ರಕ್ರಿಯೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಸಚಿವ ಬಿ. ನಾಗೇಂದ್ರ, ಕಾಂಗ್ರೆಸ್ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಒಡಕುಗಳಿಲ್ಲ. ನಮ್ಮ ಪಕ್ಷದ ಎಲ್ಲ ಸದಸ್ಯರು ಒಗ್ಗಟ್ಟಾಗಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆಯಂತೆ ಮೇಯರ್ ಆಯ್ಕೆ ನಡೆದಿದೆ ಎಂದು ಸ್ಪಷ್ಪಡಿಸಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಬಂದರೂ ಬಗೆಹರಿಸಿಕೊಳ್ಳುತ್ತೇವೆ. ಪ್ರತಿಷ್ಠೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. 

ನಮ್ಮಲ್ಲಿ ಒಡಕು ಮೂಡಿಸಲು ಬಿಜೆಪಿಯವರು ನರಿಗಳಂತೆ ಕಾಯುತ್ತಿದ್ದರು. ಆದರೆ, ನಮ್ಮಲ್ಲಿನ ಒಗ್ಗಟ್ಟು ಮುರಿಯಲು ಅವರಿಗೆ ಸಾಧ್ಯವಾಗಲಿಲ್ಲ ಎಂದರು. ಎನ್‌ಐಎ ದಾಳಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾರಣಕ್ಕಾಗಿಯೇ ಈ ಹಿಂದೆ ಚುನಾವಣೆ ಮುಂದೂಡಲಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಮೇಯರ್ ಸ್ಥಾನಕ್ಕೆ ಪೈಪೋಟಿಯಿತ್ತು ನಿಜ. ಆದರೆ, ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಲಿಲ್ಲ. ಕುಟುಂಬದಂತೆ ಸಹಜ ಪೈಪೋಟಿಯಾಗಿತ್ತು. 

ಪಕ್ಷದ ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳಬೇಕಾಗುತ್ತದೆ. ಪಕ್ಷದ ಹಿತ ಕಾಯುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಬಿಜೆಪಿಯವರು ಶ್ರೀರಾಮಚಂದ್ರರನ್ನು ಚುನಾವಣೆಗೆ ಬಳಸಿಕೊಳ್ಳಬಾರದು ಎಂದರು. ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಮುಂಭಾಗ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಸಮಗ್ರ ಅಭಿವೃದ್ಧಿ: ನನಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಮೇಯರ್‌ ಬಿ. ಶ್ವೇತಾ ತಿಳಿಸಿದರು.

Share this article